‘ಕ್ಲಿಕ್​’ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಪಡೆದ ರವಿ ಬಸ್ರೂರು ಪುತ್ರ ಪವನ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಶಶಿಕಿರಣ್ ಅವರು ‘ಶರಣ್ಯ ಫಿಲ್ಮಂಸ್’ ಮೂಲಕ ‘ಕ್ಲಿಕ್’ ಶೀರ್ಷಿಕೆಯಲ್ಲಿ ಹೊಸ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದ ಮೂಲಕ ರವಿ ಬಸ್ರೂರು ಅವರ ಮಗ ಪವನ್ ಬಸ್ರೂರು ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾನೆ.

‘ಉಗ್ರಂ’, ‘ಮಫ್ತಿ’, ‘ಕೆಜಿಎಫ್: ಚಾಪ್ಟರ್​ 2’ ಮುಂತಾದ ಸೂಪರ್ ಹಿಟ್ ಸಿನಿಮಾಗಳಿಗೆ ಸಂಗೀತ ನೀಡಿರುವ ರವಿ ಬಸ್ರೂರ್ ಗಾಯಕರಾಗಿಯೂ, ನಿರ್ಮಾಪಕರಾಗಿಯೂ ಸ್ಯಾಂಡಲ್​ವುಡ್​ಗೆ ಚಿರಪರಿಚಿತರಾಗಿದ್ದು, ಅಷ್ಟೇ ಅಲ್ಲದೆ ಪರಭಾಷೆಯ ಚಿತ್ರಗಳಿಗೂ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿ ಅವರು ಸೈ ಎನಿಸಿಕೊಂಡಿದ್ದಾರೆ. ಇದೀಗ ಅವರ ರವಿ ಬಸ್ರೂರ್ ಪುತ್ರ ಮಾಸ್ಟರ್ ಪವನ್ ಬಸ್ರೂರು ಬಾಲ ನಟನಾಗಿ ಸಿನಿಮಾ ಇಂಡಸ್ಟ್ರಿಗೆ ಪ್ರವೇಶ ಪಡೆದಿರುವುದು ವಿಶೇಷ. ‘ಕ್ಲಿಕ್​’ ಸಿನಿಮಾದಲ್ಲಿ ಪವನ್​ ಬಸ್ರೂರು ನಟಿಸಿದ್ದಾನೆ.

ಚಿತ್ರರಂಗಕ್ಕೆ ಪ್ರತಿ ದಿನ ಹೊಸಬರ ಎಂಟ್ರಿ ಆಗುತ್ತಲೇ ಇರುತ್ತದೆ. ಐಟಿ ಉದ್ಯೋಗಿಯಾಗಿರುವ ಶಶಿಕಿರಣ್ ಅವರು ಸಿನಿಮಾ ಮೇಲಿನ ಅಪಾರ ಪ್ರೀತಿಯಿಂದ ತಮ್ಮದೇ ‘ಶರಣ್ಯ ಫಿಲ್ಮಂಸ್’ ಮೂಲಕ ‘ಕ್ಲಿಕ್’ ಶೀರ್ಷಿಕೆಯಲ್ಲಿ ಹೊಸ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದ ಮೂಲಕ ರವಿ ಬಸ್ರೂರ್ ಅವರ ಮಗ ಪವನ್ ಬಸ್ರೂರು ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾನೆ. ಮಾಸ್ಟರ್ ಪವನ್ ಜೊತೆಯಲ್ಲಿ ಮತ್ತೊಬ್ಬ ಯುವ ನಟ ಕಾರ್ತಿಕ್ ಕೂಡ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಇನ್ನುಳಿದಂತೆ ಚಂದ್ರಕಲಾ ಮೋಹನ್, ರಚನಾ ದಶರತ್, ಸಂಜು ಬಸಯ್ಯ, ಸಿಲ್ಲಿಲಲ್ಲಿ ಆನಂದ್, ಸುಮನ್ ಸೇರಿದಂತೆ ಹಲವರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.

‘ಕ್ಲಿಕ್​’ ಸಿನಿಮಾದಲ್ಲಿನ ಮೆಸೇಜ್​ ಏನು?
ಮಕ್ಕಳ ಇಚ್ಛೆಗೆ ತಕ್ಕಂತೆ ಓದಲು, ಆಯ್ಕೆ ಮಾಡಲು ಬಿಡಬೇಕು ಎಂಬ ಶಿಕ್ಷಣದ ಕಥೆಯ ಸುತ್ತ ಸಾಗುವ ಈ ಚಿತ್ರಕ್ಕೆ ಯುವ ನಿರ್ದೇಶಕ ಶಶಿಕುಮಾರ್ ಆ್ಯಕ್ಷನ್-ಕಟ್ ಹೇಳಿದ್ದಾರೆ. ಸಹ ನಿರ್ದೇಶಕರಾಗಿ ವೀರು ಸಾಥ್ ನೀಡಿದ್ದಾರೆ. ಬೆಂಗಳೂರು, ಬಿಡದಿ, ರಾಮನಗರ, ಕುಂದಾಪುರ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ.

ಈಗಾಗಲೇ ಶೂಟಿಂಗ್ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ‘ಕ್ಲಿಕ್’ ಸಿನಿಮಾಗೆ ಆಕಾಶ್ ಪರ್ವ ಹಾಗೂ ವಿಶ್ವಾಸ್ ಕೌಶಿಕ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಜೀವನ್ ಗೌಡ ಛಾಯಾಗ್ರಹಣದ ಜವಾಬ್ದಾರಿ ನಿಭಾಯಿಸಿದ್ದಾರೆ. ವಿನಯ್ ಕುಮಾರ್ ಸಂಕಲನ ಮಾಡುತ್ತಿದ್ದಾರೆ. ಶೀಘ್ರ ‘ಕ್ಲಿಕ್​’ ಸಿನಿಮಾ ತೆರೆಗೆ ತರಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!