ರವೀಂದ್ರ ಜಡೇಜಾ ಭರ್ಜರಿ ಕಮ್ ಬ್ಯಾಕ್: ಕಾಂಗರೂ ಸಾಧಾರಣ ಮೊತ್ತಕ್ಕೆ ಆಲೌಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟೀಂ ಇಂಡಿಯಾ ಕೂಡಿಕೊಂಡ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ ಕಮ್ ಬ್ಯಾಕ್ ಮಾಡಿದ್ದೂ, ನಾಗ್ಪುರ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ತಂಡವು ಮೊದಲ ಇನಿಂಗ್ಸ್‌ನಲ್ಲಿ ಕೇವಲ 177 ರನ್‌ಗಳಿಗೆ ಸರ್ವಪತನ ಕಂಡಿದೆ.

ಜಡೇಜಾ 11ನೇ ಬಾರಿಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ 5 ವಿಕೆಟ್ ಗೊಂಚಲು ಪಡೆದರೆ, ಅಶ್ವಿನ್ ತಮ್ಮ ಖಾತೆಗೆ 3 ವಿಕೆಟ್‌ ಸೇರಿಸಿಕೊಂಡರು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ತಂಡಕ್ಕೆ ಟೀಂ ಇಂಡಿಯಾ ವೇಗಿಗಳಾದ ಮೊಹಮ್ಮದ್ ಸಿರಾಜ್ ಹಾಗೂ ಮೊಹಮ್ಮದ್ ಶಮಿ ಆರಂಭದಲ್ಲೇ ಶಾಕ್ ನೀಡಿದರು. ತಂಡ 2 ರನ್ ಗಳಿಸುವಷ್ಟರಲ್ಲಿ ಆರಂಬಿಕರಿಬ್ಬರು ತಲಾ ಒಂದೊಂದು ರನ್ ಬಾರಿಸಿ ಪೆವಿಲಿಯನ್ ಸೇರಿದರು.

ಬಳಿಕ ಆಸ್ಟ್ರೇಲಿಯಾ ತಂಡಕ್ಕೆ ಮೂರನೇ ವಿಕೆಟ್‌ಗೆ ಮಾರ್ನಸ್ ಲಬುಶೇನ್ ಹಾಗೂ ಸ್ಟೀವ್ ಸ್ಮಿತ್ ನೆಲಕಚ್ಚಿ ಆಡುವ ಮೂಲಕ ತಂಡಕ್ಕೆ ಆಸರೆಯಾದರು. ಪರಿಣಾಮ ಲಂಚ್ ಬ್ರೇಕ್ ವೇಳೆಗೆ ಈ ಜೋಡಿ ಅರ್ಧಶತಕದ ಜತೆಯಾಟವಾಡಿದರು. ಆದರೆ ಲಂಚ್‌ ಬ್ರೇಕ್‌ ಬಳಿಕ ಪಂದ್ಯದಲ್ಲಿ ಕಮ್‌ಬ್ಯಾಕ್‌ ಮಾಡುವಲ್ಲಿ ಟೀಂ ಇಂಡಿಯಾ ಸ್ಪಿನ್‌ದ್ವಯರು ಯಶಸ್ವಿಯಾದರು.

ಈ ವೇಳೆ 123 ಎಸೆತಗಳನ್ನು ಎದುರಿಸಿ 8 ಬೌಂಡರಿ ಸಹಿತ 49 ರನ್ ಬಾರಿಸಿದ್ದ ಮಾರ್ನಸ್ ಲಬುಶೇನ್ ಅವರನ್ನು ಬಲಿ ಪಡೆಯುವ ಮೂಲಕ ರವೀಂದ್ರ ಜಡೇಜಾ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾದರು. ಇನ್ನು ಇದರ ಬೆನ್ನಲ್ಲೇ ಮ್ಯಾಟ್ ರೆನ್‌ಶೋ, ಶೂನ್ಯ ಸುತ್ತಿ ಪೆವಿಲಿಯನ್‌ ಪೆರೇಡ್ ನಡೆಸಿದರು. ಇದರ ಬೆನ್ನಲ್ಲೇ ಸ್ಮಿತ್‌ ಕೂಡಾ ಜಡೇಜಾಗೆ ಮೂರನೇ ಬಲಿಯಾದರು.

109 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಗೆ ಸಿಲುಕಿತ್ತು. ಆದರೆ ಈ ವೇಳೆ 6ನೇ ವಿಕೆಟ್‌ಗೆ ಪೀಟರ್ ಹ್ಯಾಂಡ್ಸ್‌ಕಂಬ್‌ (31) ಹಾಗೂ ಅಲೆಕ್ಸ್‌ ಕ್ಯಾರಿ(36) ಜೋಡಿ 53 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಆದ್ರೆ ಅಂತಿಮ ಕೇವಲ 15 ರನ್‌ಗಳ ಅಂತರದಲ್ಲಿ ಆಸ್ಟ್ರೇಲಿಯಾ ತಂಡವು ಕೊನೆಯ 5 ವಿಕೆಟ್ ಕಳೆದುಕೊಂಡಿತು.

ಜಡೇಜಾ ಕೇವಲ 47 ರನ್ ನೀಡಿ 5 ವಿಕೆಟ್ ಕಬಳಿಸಿದರೆ, ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 42 ರನ್ ನೀಡಿ 3 ವಿಕೆಟ್ ಉರುಳಿಸಿದರು. ಇನ್ನು ವೇಗಿಗಳಾದ ಮೊಹಮ್ಮದ್ ಶಮಿ ಹಾಗೂ ಮೊಹಮ್ಮದ್ ಸಿರಾಜ್ ತಲಾ ಒಂದೊಂದು ವಿಕೆಟ್ ಪಡೆದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!