ಆರ್ ಬಿಐಗೆ 90ನೇ ವರ್ಷದ ಸಂಭ್ರಮ: ವಿಶೇಷ ನಾಣ್ಯ ಬಿಡುಗಡೆಗೊಳಿಸಿದ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಭಾರತೀಯ ರಿಸರ್ವ್ ಬ್ಯಾಂಕಿನ (ಆರ್ ಬಿಐ) 90ನೇ ಸಂಸ್ಥಾಪನಾ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಸೋಮವಾರ ವಿಶೇಷ ನಾಣ್ಯವನ್ನು ಬಿಡುಗಡೆಗೊಳಿಸಿದರು.

ಈ ವಿಶೇಷ ನಾಣ್ಯವು ಶೇ.99.99ರಷ್ಟು ಶುದ್ಧವಾದ ಬೆಳ್ಳಿಯಿಂದ ಮಾಡಲ್ಪಟ್ಟಿದ್ದು, ಅಂದಾಜು 40 ಗ್ರಾಂ ತೂಕ ಹೊಂದಿದೆ. ಇದು ಆರ್ ಬಿಐಯ ಶ್ರೀಮಂತ ಇತಿಹಾಸ ಹಾಗೂ 9 ದಶಕಗಳ ಸಾಧನೆಯನ್ನು ಪ್ರತಿಬಿಂಬಿಸುತ್ತದೆ.

ಕಾರ್ಯಕ್ರಮದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹಾಗೂ ಆರ್ ಬಿಐ ಇತರ ಸದಸ್ಯರು ಪಾಲ್ಗೊಂಡಿದ್ದರು.

ಈ ಸಂದರ್ಭ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಆರ್ ಬಿಐ ವೃತ್ತಿಪರತೆ ಹಾಗೂ ಬದ್ಧತೆಯನ್ನು ಶ್ಲಾಘಿಸಿದರು. ಕಳೆದ ಒಂದು ದಶಕದಲ್ಲಿ ಆರ್ ಬಿಐ ಹಾಗೂ ತಮ್ಮ ಸರ್ಕಾರ ಕೈಗೊಂಡ ಕ್ರಮಗಳ ಫಲವಾಗಿ ಬ್ಯಾಂಕಿಂಗ್ ವಲಯ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.

ಮುಂದಿನ ಹತ್ತು ವರ್ಷಗಳಲ್ಲಿ ಕೇಂದ್ರೀಯ ಬ್ಯಾಂಕ್ ಮುಂದುವರಿದ ಡಿಜಿಟಲ್ ವಹಿವಾಟುಗಳು ಹಾಗೂ ಆರ್ಥಿಕತೆಯನ್ನು ಒಳಗೊಂಡ ಬೆಳವಣಿಗೆಗೆ ಹೆಚ್ಚಿನ ಗಮನ ಕೇಂದ್ರೀಕರಿಸಲಿದೆ ಎಂದು ತಿಳಿಸಿದರು.

ಬ್ಲಾಕ್ ಚೈನ್ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಹಾಗೂ ಯಂತ್ರ ಕಲಿಕೆ ಮಹತ್ವದ ಬಗ್ಗೆ ಭಾಷಣದಲ್ಲಿ ಪ್ರಧಾನಿ ಪ್ರಸ್ತಾಪಿಸಿದರು.

ನಾಣ್ಯದ ವಿಶೇಷತೆಗಳೇನು?
ಈ ನಾಣ್ಯದ ಮಧ್ಯ ಭಾಗದಲ್ಲಿ ಜನಪ್ರಿಯ ಆರ್ ಬಿಐ ಲಾಂಛನವಿದೆ. ಅದರ ಕೆಳಭಾಗದಲ್ಲಿ “RBI@90” ಎಂದು ಕೆತ್ತಲಾಗಿದೆ. ಇದು ಆರ್ ಬಿಐಯ ದೀರ್ಘ ಇತಿಹಾಸ ಹಾಗೂ ಭಾರತದ ಹಣಕಾಸು ಸುಸ್ಥಿರತೆ ನಿರ್ವಹಣೆಯಲ್ಲಿನ ಅದರ ಅದರ ಪಾತ್ರವನ್ನು ಪ್ರತಿನಿಧಿಸುತ್ತದೆ. ಇನ್ನು ಇದು ಅಶೋಕ ಪಿಲ್ಲರನ ರಾಷ್ಟ್ರೀಯ ಲಾಂಛನವನ್ನು ಕೂಡ ಹೊಂದಿದ್ದು, ದೇವನಾಗರಿ ಲಿಪಿಯಲ್ಲಿ ‘ಸತ್ಯಮೇವ ಜಯತೆ’ಎಂದು ಕೆತ್ತಲಾಗಿದೆ.

ಆರ್ ಬಿಐ ಇತಿಹಾಸ
ಭಾರತೀಯ ರಿಸರ್ವ್ ಬ್ಯಾಂಕ್ 1935ರ ಏಪ್ರಿಲ್ 1ರಂದು ಸ್ಥಾಪನೆಯಾಗಿದೆ.2024ನೇ ಸಾಲಿನ ಏಪ್ರಿಲ್ 1 ಆರ್​ಬಿಐನ 90ನೇ ಸಂಸ್ಥಾಪನಾ ದಿನವಾಗಿದೆ. ಹಿಲ್ಟನ್ ಯಂಗ್ ಆಯೋಗದ ಶಿಫಾರಸ್ಸುಗಳನ್ನು ಆಧರಿಸಿ ಆರ್ ಬಿಐ ಅನ್ನು ಸ್ಥಾಪಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!