ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಇಂಡಿಯನ್ ಪ್ರೀಮಿಯರ್ ಲೀಗ್ 2024 ರ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಲಿವೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು, ದಟ್ಟಣೆ ಹಾಗೂ ಟ್ರಾಫಿಕ್ ಸಮಸ್ಯೆಗೆ ಸಂಬಂಧಿಸಿದಂತೆ ಬೆಂಗಳೂರು ಸಂಚಾರ ಪೊಲೀಸರು ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ. ಎಲ್ಲೆಲ್ಲಿ ವಾಹನ ಸಂಚಾರ ನಿಷೇಧವಿದೆ ಎಂದು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಲಿನ ರಸ್ತೆಗಳಲ್ಲಿ ಶನಿವಾರ ಮಧ್ಯಾಹ್ನ 3ರಿಂದ ರಾತ್ರಿ 11ರವರೆಗೆ ವಾಹನ ನಿಲುಗಡೆ ನಿಷೇಧಿಸಲಾಗಿದೆ. ಕ್ವೀನ್ಸ್ ರಸ್ತೆ, ಎಂಜೆ ರಸ್ತೆ, ಕಬ್ಬನ್ ರಸ್ತೆ, ರಾಜಭವನ, ಮ್ಯೂಸಿಯಂ ರಸ್ತೆ, ಸೆಂಟ್ರಲ್ ಸ್ಟ್ರೀಟ್ ರಸ್ತೆ, ಸೇಂಟ್ ಮಾರ್ಕ್ ರಸ್ತೆ, ಕಸ್ತೂರಿ ಬಾ ರಸ್ತೆ, ಟ್ರಿನಿಟಿ ಸರ್ಕಲ್, ಲ್ಯಾವೆಲ್ಲೆ ರಸ್ತೆ ಮತ್ತು ನೃಪತುಂಗ ರಸ್ತೆಯಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ.
ಪಂದ್ಯ ವೀಕ್ಷಿಸಲು ಬರುವವರಿಗೆ ಬೇರೆಡೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಸೇಂಟ್ ಜೋಸೆಫ್ ಇಂಡಿಯನ್ ಸ್ಕೂಲ್ ಮೈದಾನ, ಕಿಂಗ್ಸ್ ರಸ್ತೆ, ಶಿವಾಜಿನಗರ ಬಸ್ ನಿಲ್ದಾಣ ಮೊದಲನೇ ಮಹಡಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಇನ್ನು ಬೆಂಗಳೂರು ಸಂಚಾರಿ ಪೊಲೀಸರು ಮೈದಾನದ ಸುತ್ತಮುತ್ತ ಸಂಚಾರ ವಾಹನ ನಿಷೇಧಿಸಿದ್ದಾರೆ.