ನಮ್ಮ ಸಮಾಜದಲ್ಲಿ “ಜನರು ಏನು ಅಂದುಕೊಳ್ಳುತ್ತಾರೋ?” ಎಂಬ ಭಯ ಅನೇಕರನ್ನು ಕಾಡುತ್ತದೆ. ಈ ಭಯದಿಂದಾಗಿಯೇ ಹಲವರು ತಮ್ಮ ಕನಸುಗಳನ್ನು ಮರೆತು, ಇತರರ ಅಭಿಪ್ರಾಯಕ್ಕೆ ತಕ್ಕಂತೆ ಬದುಕಲು ಶುರು ಮಾಡುತ್ತಾರೆ. ಆದರೆ, ಇತರರ ಮಾತಿಗೆ ಅತಿಯಾದ ಪ್ರಾಮುಖ್ಯತೆ ನೀಡುವುದು ನಿಮ್ಮ ಜೀವನವನ್ನು ಹೇಗೆಲ್ಲಾ ಹಾದಿ ತಪ್ಪಿಸಬಹುದು ಎಂಬ ಮಾಹಿತಿ ಇಲ್ಲಿದೆ.
ನೀವು ಯಾವಾಗಲೂ ಇತರರ ಸಲಹೆ ಅಥವಾ ಅನುಮೋದನೆಗಾಗಿ ಕಾಯುತ್ತಿದ್ದರೆ, ಕಾಲಕ್ರಮೇಣ ನಿಮ್ಮ ಸ್ವಂತ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತೀರಿ. ಸಣ್ಣ ಪುಟ್ಟ ವಿಷಯಗಳಿಗೂ ಬೇರೆಯವರ ಮೇಲೆ ಅವಲಂಬಿತರಾಗುವುದು ನಿಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ.
ಪ್ರತಿಯೊಬ್ಬರನ್ನೂ ಮೆಚ್ಚಿಸುವುದು ಅಸಾಧ್ಯದ ಮಾತು. ಒಬ್ಬರಿಗೆ ಸರಿ ಅನ್ನಿಸುವುದು ಇನ್ನೊಬ್ಬರಿಗೆ ತಪ್ಪು ಎನಿಸಬಹುದು. ಎಲ್ಲರ ಮಾತನ್ನು ಕೇಳುತ್ತಾ ಹೋದರೆ ಮನಸ್ಸು ಗೊಂದಲದ ಗೂಡಾಗುತ್ತದೆ. ಇದು ಅನಗತ್ಯ ಒತ್ತಡ, ಆತಂಕ ಮತ್ತು ಮಾನಸಿಕ ಅಶಾಂತಿಗೆ ಕಾರಣವಾಗುತ್ತದೆ.
ನಿಮ್ಮ ಜೀವನದ ಗುರಿ ಏನು ಎಂಬುದು ನಿಮಗಿಂತ ಚೆನ್ನಾಗಿ ಬೇರೆಯವರಿಗೆ ತಿಳಿಯಲು ಸಾಧ್ಯವಿಲ್ಲ. ಇತರರು ತಮ್ಮ ಅನುಭವ ಅಥವಾ ಸೀಮಿತ ಜ್ಞಾನದಿಂದ ನಿಮಗೆ ಸಲಹೆ ನೀಡುತ್ತಾರೆ. ಅವರ ಮಾತು ಕೇಳಿ ನಿಮ್ಮ ಆಸಕ್ತಿಯ ಕ್ಷೇತ್ರವನ್ನು ಬಿಟ್ಟುಕೊಟ್ಟರೆ, ಭವಿಷ್ಯದಲ್ಲಿ ನೀವು ಪಶ್ಚಾತ್ತಾಪ ಪಡಬೇಕಾಗುತ್ತದೆ.
ಬೇರೆಯವರು ನಿಮ್ಮನ್ನು ಟೀಕಿಸಿದಾಗ ಅದನ್ನು ಗಂಭೀರವಾಗಿ ಪರಿಗಣಿಸಿದರೆ, ನಿಮ್ಮಲ್ಲಿ ಕೀಳರಿಮೆ ಮೂಡುತ್ತದೆ. “ನಾನು ಯಾವುದಕ್ಕೂ ಲಾಯಕ್ಕಿಲ್ಲ” ಎಂಬ ಭಾವನೆ ಬೆಳೆಯುತ್ತದೆ. ಇದು ನಿಮ್ಮ ಬೆಳವಣಿಗೆಯನ್ನು ಕುಂಠಿತಗೊಳಿಸಿ, ಜೀವನದಲ್ಲಿ ಅತೃಪ್ತಿ ಮೂಡುವಂತೆ ಮಾಡುತ್ತದೆ.
ಬೇರೆಯವರು ನಿಮ್ಮ ಬಗ್ಗೆ ಏನು ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಯೋಚಿಸುವುದು ಅಥವಾ ಅವರ ವಿಮರ್ಶೆಗೆ ಪ್ರತಿಕ್ರಿಯೆ ನೀಡುವುದು ಸಮಯದ ವ್ಯರ್ಥವಷ್ಟೇ. ಈ ಸಮಯವನ್ನು ನಿಮ್ಮ ಕೌಶಲ ಅಭಿವೃದ್ಧಿಗೆ ಬಳಸಿಕೊಂಡರೆ ಜೀವನದಲ್ಲಿ ಯಶಸ್ಸು ಸಾಧಿಸಬಹುದು.



