ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂವಿಧಾನ ಅಂಗೀಕಾರವಾಗಿ ಇಂದಿಗೆ 50 ವರ್ಷ ಆಯ್ತು. ಈ ದಿನವನ್ನು ನಾವು ಸಂವಿಧಾನ ದಿನ ಎಂದು ಆಚರಣೆ ಮಾಡುತ್ತಿದ್ದೇವೆ. ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಸಂಸ್ಥೆಗಳು ಸಂವಿಧಾನದಡಿಯಲ್ಲೇ ನಡೆಯಬೇಕು. ಶಾಲಾ-ಕಾಲೇಜುಗಳಲ್ಲಿ ಸಂವಿಧಾನದ ಪೀಠಿಕೆ ಓದುವುದನ್ನು ಕಡ್ಡಾಯ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎಲ್ಲ ಮಕ್ಕಳಿಗೂ ಸಂವಿಧಾನ ಅರ್ಥವಾಗಬೇಕು. ಶಾಲೆಗಳಲ್ಲೇ ಸಂವಿಧಾನ ಪೀಠಿಕೆ ಓದಿಸುತ್ತಿದ್ದೇವೆ ಎಂದರು.
ಸಂವಿಧಾನ ಬದಲಾವಣೆ ಆಗಬಾರದೆಂದು ಹೋರಾಟ ಮಾಡುತ್ತಿದ್ದೇವೆ. ಸಂವಿಧಾನದಲ್ಲಿ 106 ತಿದ್ದುಪಡಿಗಳಾಗಿವೆ. ಸಂವಿಧಾನ ಜಾರಿಗೆ ಬಂದು ಮುಂದಿನ ವರ್ಷ ಜನವರಿಗೆ 75 ವರ್ಷ ತುಂಬಲಿದೆ. ದೀರ್ಘಕಾಲದ ಶಾಂತಿಯಲ್ಲಿರುವ ಸಂವಿಧಾನ ಎಂದರೆ ಅದು ಭಾರತದ ಸಂವಿಧಾನ. ಸಂವಿಧಾನ ಎಷ್ಟೇ ಚೆನ್ನಾಗಿದ್ದರೂ ಒಳ್ಳೆಯವರ ಕೈಯಲ್ಲಿ ಇದ್ದರೆ ಒಳ್ಳೆಯದಾಗುತ್ತದೆ. ಕೆಟ್ಟವರ ಕೈಯಲ್ಲಿ ಇದ್ದರೆ ಕೆಟ್ಟದಾಗುತ್ತೆ ಅಂತ ಬಿಆರ್ ಅಂಬೇಡ್ಕರ್ ಅವರು ಹೇಳಿದ್ದಾರೆ ಎಂದು ತಿಳಿಸಿದರು.