ಟೀಂ ಇಂಡಿಯಾ ಕೋಚ್ ಆಗಲು ರೆಡಿ, ಆದ್ರೆ: ಗೌತಮ್ ಗಂಭೀರ್ ಹಾಕಿದ್ರು ಒಂದು ಕಂಡೀಷನ್

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಟಿ20 ವಿಶ್ವಕಪ್ ಬಳಿಕ ಟೀಮ್​ ಇಂಡಿಯಾದ ಕೋಚ್ ಹುದ್ದೆಯಿಂದ ರಾಹುಲ್ ದ್ರಾವಿಡ್ ಕೆಳಗಿಳಿಯಲಿದ್ದಾರೆ. ಹೀಗಾಗಿ ಈಗಾಗಲೇ ಬಿಸಿಸಿಐ ನೂತನ ಕೋಚ್​ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಮೇ 27 ಕೊನೆಯ ದಿನವಾಗಿದೆ.

ಸದ್ಯ ಕೋಚ್​ ಹುದ್ದೆ ಅಲಂಕರಿಸಲು ಮಾಜಿ ವಿದೇಶಿ ಆಟಗಾರರು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಮುಖ್ಯ ಕೋಚ್ ಹುದ್ದೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಹುಡುಕಾಟವನ್ನು ತೀವ್ರಗೊಳಿಸಿದೆ. ಇದರ ಬೆನ್ನಲ್ಲೇ ಗೌತಮ್ ಗಂಭೀರ್ ತಮ್ಮ ಒಂದು ಷರತ್ತು ಒಪ್ಪಿದರೆ ಕೋಚ್​ ಆಗಲು ಸಿದ್ಧ ಎಂದು ಹೇಳಿದ್ದಾರೆ.

ದೈನಿಕ್ ಜಾಗರಣ್‌ ವರದಿ ಪ್ರಕಾರ, ಗೌತಮ್ ಗಂಭೀರ್ ಭಾರತದ ಮುಖ್ಯ ಕೋಚ್ ಆಗಲು ಉತ್ಸುಕರಾಗಿದ್ದಾರೆ. ಆದರೆ, ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಭರ್ತಿ ಮಾಡುವ ಮುನ್ನ ‘ಒಂದು ಷರತ್ತು’ ಹೊಂದಿದ್ದಾರೆ. ‘ಆಯ್ಕೆಯ ಗ್ಯಾರಂಟಿ’ ನೀಡಿದರೆ ಮಾತ್ರ ಗಂಭೀರ್ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಸಿದ್ಧರಿದ್ದಾರೆ ಎಂದು ವರದಿಯಾಗಿದೆ.

ಇನ್ನು ಟೀಂ ಇಂಡಿಯಾ ಕೋಚ್ ಹುದ್ದೆಗೆ ರಿಕಿ ಪಾಂಟಿಂಗ್, ಜಸ್ಟಿನ್ ಲ್ಯಾಂಗರ್, ಸ್ಟಿಫನ್ ಫ್ಲೆಮಿಂಗ್, ಆಂಡಿ ಫ್ಲವರ್ ಸೇರಿದಂತೆ ಹಲವು ಹೆಸರುಗಳು ಕೇಳಿಬಂದಿದ್ದರೂ, ಬಿಸಿಸಿಐ, ಗೌತಮ್ ಗಂಭೀರ್ ಅವರನ್ನು ಆಯ್ಕೆ ಮಾಡಲು ಒಲವು ತೋರಿದೆ ಎನ್ನಲಾಗುತ್ತಿದೆ.

‘ತಮ್ಮನ್ನು ಕೋಚ್ ಅಗಿ ಸೆಲೆಕ್ಟ್ ಮಾಡುವ ಗ್ಯಾರಂಟಿ ನೀಡಿದರಷ್ಟೇ ತಾವು ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುತ್ತೇನೆ’ ಇಲ್ಲದಿದ್ದರೆ ತಾವು ನಾಮಾಕಾವಸ್ತೆಗಾಗಿ ಅರ್ಜಿ ಹಾಕುವುದಿಲ್ಲ ಎಂದು ಗೌತಿ ಖಡಕ್ ಆಗಿ ಕಂಡೀಷನ್ ಹಾಕಿದ್ದಾರಂತೆ.

ಗೌತಮ್ ಗಂಭೀರ್ ಒಂದು ವೇಳೆ ಟೀಂ ಇಂಡಿಯಾ ಹೆಡ್ ಕೋಚ್ ಆಗಿ ನೇಮಕವಾದರೆ, ಕೆಕೆಆರ್ ತಂಡದ ಮೆಂಟರ್ ಹುದ್ದೆಯನ್ನು ಕೈಬಿಡಬೇಕಾಗುತ್ತದೆ. ಸದ್ಯ 17ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ಕೆಕೆಆರ್ ತಂಡವು ಫೈನಲ್‌ಗೆ ಲಗ್ಗೆಯಿಟ್ಟಿದೆ.

ನೂತನ ಕೋಚ್​ ಆಗಿ ಆಯ್ಕೆಯಾದವರ ಕಾರ್ಯಾವಧಿ 2027ರ ಡಿಸೆಂಬರ್ 31ಕ್ಕೆ ಮುಕ್ತಾಯಗೊಳ್ಳುತ್ತದೆ. 2027ರಲ್ಲಿ ನಡೆಯುವ ಏಕದಿನ ವಿಶ್ವಕಪ್​ ಟೂರ್ನಿಯೂ ಈ ಕೋಚ್​ಗೆ ಸಿಗಲಿದೆ. ಕೋಚ್​ ಹುದ್ದೆಗೆ ಅರ್ಜಿ ಸಲ್ಲಿಸಲು ಇದೇ 27ರಂದು ಕೊನೆಯ ದಿನವಾಗಿದೆ. ಆಯ್ಕೆ ಪ್ರಕ್ರಿಯೆ ಅರ್ಜಿಗಳ ಸಂಪೂರ್ಣ ಪರಿಶೀಲನೆಯನ್ನು ನಡೆಸಿ ನಂತರ ವೈಯಕ್ತಿಕ ಸಂದರ್ಶನಗಳು ಮತ್ತು ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳ ಮೌಲ್ಯಮಾಪನ ಒಳಗೊಂಡಿರುತ್ತದೆ. ಆಯ್ಕೆಯಾದ ಹೊಸ ಕೋಚ್‌ ಟಿ20 ವಿಶ್ವಕಪ್‌ ಟೂರ್ನಿಯ ನಂತರ ತಕ್ಷಣವೇ ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.

ತಿರುಗೇಟು ಕೊಟ್ಟ ಜಯ್​ ಶಾ
ಆಸ್ಟ್ರೇಲಿಯಾದ ಮಾಜಿ ಆಟಗಾರರು ಭಾರತ ತಂಡದ ಕೋಚ್​ ಹುದ್ದೆಯ ಬಗ್ಗೆ ನಿರಾಸಕ್ತಿಕ ಹೇಳಿಕೆ ನೀಡುತ್ತಿರುವ ಬೆನ್ನಲ್ಲೇ ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಈ ಎಲ್ಲ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಭಾರತೀಯ ಕ್ರಿಕೆಟ್‌ ತಂಡದ ಮುಖ್ಯ ತರಬೇತುದಾರರ ಹುದ್ದೆಗೆ ನಾವು ಯಾವುದೇ ಆಸ್ಟ್ರೇಲಿಯಾದವರನ್ನು ಸಂಪರ್ಕಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಕೋಚಿಂಗ್​ ಹುದ್ದೆಯ ಬಗ್ಗೆ ನೀಡುತ್ತಿರುವ ವದಂತಿಗಳನ್ನು ನಂಬಬಾರದು ಎಂದು ತಿಳಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!