ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ 13,500 ಶಾಲಾ ಶಿಕ್ಷಕರ ನೇಮಕಾತಿಯನ್ನು ಶೀಘ್ರದಲ್ಲಿಯೇ ಮಾಡಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಎಸ್. ಮಧು ಬಂಗಾರಪ್ಪ ಹೇಳಿದ್ದಾರೆ.
ಮಂಗಳೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೇಮಕಾತಿ ವಿಚಾರ ಕೋರ್ಟ್‌ನಲ್ಲಿ ಇರುವುದರಿಂದ ಈ ಪ್ರಕ್ರಿಯೆ ವಿಳಂಬವಾಗುತ್ತಿದೆ. ಆದಷ್ಟು ಶೀಘ್ರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲು ಆದ್ಯತೆ ನೀಡಲಾಗಿದೆ ಎಂದರು.
ರಾಜ್ಯದ ಶಿಕ್ಷಣದ ಇತಿಹಾಸದಲ್ಲಿಯೇ ಈ ಬಾರಿ 25 ಸಾವಿರ ಮಂದಿ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ಮೂಲಕ ನಡೆಯುತ್ತಿದ್ದು, ಜು.21ಕ್ಕೆ ಇದು ಪೂರ್ಣಗೊಳ್ಳಲಿದೆ. ರಾಜ್ಯದಲ್ಲಿ 50ಸಾವಿರ ಶಿಕ್ಷಕರ ಕೊರತೆಯಿದ್ದು, ಈಗಾಗಲೇ 33 ಸಾವಿರ ಅತಿಥಿ ಶಿಕ್ಷಕರನ್ನು ತೆಗೆದುಕೊಂಡಿದ್ದೇವೆ. ಈಗ ವರ್ಗಾವಣೆಯ ಬಳಿಕ ಖಾಲಿಯಾಗುವ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡು ಈ ಬಾರಿ ಕಾರ್ಯ ನಿರ್ವಹಣೆ ಮಾಡುತ್ತೇವೆ. ಆದರೆ ಶೀಘ್ರದಲ್ಲಿಯೇ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡರೆ ಶಿಕ್ಷಕರ ಕೊರತೆ ಸಮಸ್ಯೆ ಸ್ವಲ್ಪಮಟ್ಟಿಗೆ ನಿವಾರಣೆಯಾಗುತ್ತದೆ ಎಂದರು.
ಸಸ್ಯ ಶಾಮಲಾ ಯೋಜನೆ
ರಾಜ್ಯದ ಶಿಕ್ಷಣ ಇಲಾಖೆ ಹಾಗೂ ಅರಣ್ಯ ಇಲಾಖೆ ಜತೆಗೂಡಿಕೊಂಡು ರಾಜ್ಯದ ಎಲ್ಲ ಸರಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳಲ್ಲೂ ಗಿಡಗಳನ್ನು ನೆಡುವ ಸಸ್ಯ ಶಾಮಲಾ ಯೋಜನೆಯನ್ನು ಜಾರಿಗೊಳಿಸಲು ಸಿದ್ಧತೆ ಮಾಡಿಕೊಂಡಿದ್ದು, ಸರಿಸುಮಾರು 50 ಸಾವಿರ ಗಿಡಗಳನ್ನು ನೆಟ್ಟು ಬೆಳೆಸುವ ಕೆಲಸ ಈ ವರ್ಷದಲ್ಲಿ ಮಾಡುತ್ತೇವೆ. ಇದು ಬರೀ ಈ ವರ್ಷ ಮಾತ್ರ ಗಿಡ ನೆಡುವ ಕೆಲಸವಲ್ಲ . ನೆಟ್ಟ ಗಿಡವನ್ನು ವರ್ಷಪೂರ್ತಿ ಪೋಷಣೆ ಮಾಡುವ ಹೊಣೆಯನ್ನು ಕೂಡ ಮಕ್ಕಳಿಗೆ ನೀಡಲಾಗುತ್ತದೆ ಎಂದರು.
ಈಗಾಗಲೇ ರಾಜ್ಯದ ಶಿಕ್ಷಣ ನೀತಿ(ಎಸ್‌ಇಪಿ)ಯ ವಿಚಾರದಲ್ಲಿ ಮುಖ್ಯಮಂತ್ರಿಗಳ ವಿಶೇಷ ಸಭೆಯನ್ನು ಆ.2ರಂದು ನಿರ್ಧಾರ ಮಾಡಲಾಗಿದೆ. ಇಲ್ಲಿನ ಶಿಕ್ಷಕರ ಕ್ಷೇತ್ರದ ತಜ್ಞರು ಸೇರಿದಂತೆ ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ್ ಹಾಗೂ ನಾನು ಭಾಗಿಯಾಗುತ್ತೇನೆ. ಇದು ಎಸ್‌ಇಪಿ ಕುರಿತಾದ ಮೊದಲ ಪ್ರಾಥಮಿಕ ಸಭೆಯಾಗಲಿದೆ. ಇಲ್ಲಿ ಈ ಕುರಿತು ಮುಖ್ಯವಾದ ರೂಪುರೇಷೆಗಳನ್ನು ಮಾಡಲಾಗುತ್ತದೆ. ಪಠ್ಯಪುಸ್ತಕದ ರಚನೆ ಸೇರಿದಂತೆ ಕೆಪಿಎಸ್‌ಇ, ನವೋದಯ ಶಾಲೆಗಳ ನಿರ್ಮಾಣದ ಕುರಿತು ಕೂಡ ಪ್ರಮುಖ ವಿಚಾರಗಳು ಇಲ್ಲಿ ನಿರ್ಧಾರವಾಗಲಿದೆ. ಏಳೆಂಟು ತಿಂಗಳ ಒಳಗಡೆ ಈ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣ ಮಾಡುತ್ತೇವೆ ಎಂದು ಮಧು ಬಂಗಾರಪ್ಪ ಹೇಳಿದರು.