ಸರಕಾರ ವಿರುದ್ಧ ಕೆಂಪಣ್ಣ ಆರೋಪ ನೂರಕ್ಕೆ ನೂರರಷ್ಟು ಸತ್ಯ: ಆರ್. ಅಶೋಕ್

ಹೊಸದಿಗಂತ ವರದಿ,ದಾವಣಗೆರೆ:

ಮಂತ್ರಿಗಳು, ಶಾಸಕರ ಹೆಸರು ಹೇಳಿಕೊಂಡು ಅಧಿಕಾರಿಗಳು ಶೇ.40 ಹಣ ವಸೂಲು ಮಾಡುತ್ತಿದ್ದಾರೆಂಬ ಗುತ್ತಿಗೆದಾರರ ಸಂಘದ ಕೆಂಪಣ್ಣ ಆರೋಪ ನೂರಕ್ಕೆ ನೂರರಷ್ಟು ಸತ್ಯವಾಗಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.

ಜಿಲ್ಲೆಯ ಹರಿಹರ ತಾಲೂಕು ರಾಜನಹಳ್ಳಿಗೆ ಶುಕ್ರವಾರ ಶ್ರೀ ವಾಲ್ಮೀಕಿ ಜಾತ್ರೆಗೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಿಗಳ ಮುಖಾಂತರ ಕಾಂಗ್ರೆಸ್ ಸರ್ಕಾರ ಶೇ.40 ಹಣ ವಸೂಲು ಮಾಡುತ್ತಿದೆಯೆಂಬ ಕೆಂಪಣ್ಣ ಆರೋಪ ಸತ್ಯವಾಗಿದೆ. ಈಗಾಗಲೇ ಆದಾಯ ತೆರಿಗೆ ಇಲಾಖೆಯಿಂದ 2 ಸಲ ದಾಳಿ ಮಾಡಿದಾಗ ನೂರಾರು ಕೋಟಿ ರೂ. ಹಣ ಪತ್ತೆಯಾಗಿರುವುದೇ ಇದಕ್ಕೆ ಸಾಕ್ಷಿ. ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ದಿನದಿಂದಲೇ ಲೂಟಿ ಮಾಡುತ್ತಿದ್ದು, ಇದೊಂದು ಲೂಟಿಕೋರರ ಸರ್ಕಾರ ಎಂದು ಆರೋಪಿಸಿದರು.

ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಇದೇ ಗುತ್ತಿಗೆದಾರರ ಸಂಘದ ಕೆಂಪಣ್ಣನನ್ನು ಮುಂದಿಟ್ಟುಕೊಂಡು, ಕಾಂಗ್ರೆಸ್ಸಿನವರೇ ಕ್ಯಾಂಪೇನ್ ಮಾಡಿದ್ದರು. ಈಗ ಅದೇ ಕೆಂಪಣ್ಣ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ವಿರುದ್ಧ ಧ್ವನಿ ಎತ್ತಿದ್ದಾರೆ. ಕೆಂಪಣ್ಣ ಆರೋಪಕ್ಕೆ ಕಾಂಗ್ರೆಸ್ಸಿನವರು ಏನು ಹೇಳುತ್ತಾರೆ? ಒಂದಿಷ್ಟಾದರೂ ಮಾನ-ಮರ್ಯಾದೆ ಇದ್ದರೆ ರಾಜೀನಾಮೆ ನೀಡಿ, ಅಧಿಕಾರದಿಂದ ಕೆಳಗಿಳಿಯಲಿ. ಸಿದ್ದರಾಮಯ್ಯ ಸರ್ಕಾರಕ್ಕೆ ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆ ಇಲ್ಲ ಎಂದು ಅವರು ಟೀಕಿಸಿದರು.

ಕೆಂಪಣ್ಣ ಆರೋಪವನ್ನು ಗಂಭೀರವಾಗಿ ಪರಿಗಣಿಸಿ, ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು. ಕಾಂಗ್ರೆಸ್ ಸರ್ಕಾರದ ಶೇ.40 ಕಮೀಷನ್ ದಂಧೆ ಕುರಿತಂತೆ ವಿಧಾನಸೌಧದ ಒಳಗೆ ಹಾಗೂ ಹೊರಗೆ ನಾವು ಹೋರಾಟ ಮಾಡುತ್ತೇವೆ. ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಕುರಿತಂತೆ ದಾಖಲೆಗಳನ್ನು ನೀಡುವುದಾಗಿ ಸ್ವತಃ ಕೆಂಪಣ್ಣ ಕರೆ ಮಾಡಿದ್ದರು. ನಾವಂತೂ ಇದನ್ನು ಇಲ್ಲಿಗೆ ಬಿಡುವುದಿಲ್ಲ. ಸಿದ್ದರಾಮಯ್ಯ ಸರ್ಕಾರವು ಅಧಿಕಾರಿಗಳನ್ನು ಲೂಟಿ ಮಾಡಲು ಬಿಟ್ಟಿದ್ದಾರೆ. ವಾರಕ್ಕೆ, ತಿಂಗಳಿಗೆ ಇಂತಿಷ್ಟು ಅಂತಾ ಲೂಟಿಗೆ ಕಾಂಗ್ರೆಸ್ ಸರ್ಕಾರದವರು ಇಳಿದಿದ್ದಾರೆ. ಹಾಗಾಗಿ ನಿಷ್ಠಾವಂತ, ಪ್ರಾಮಾಣಿಕ ಅಧಿಕಾರಿಗಳು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡುತ್ತಿದ್ದಾರೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!