ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಜೆಟ್ನಲ್ಲಿ ಹೇಳಿದಂತೆ ಔಷಧ ವಸ್ತುಗಳ ಮೇಲಿನ ಆಮದು ಸುಂಕವನ್ನು ಇಳಿಸಲಾಗಿದ್ದು, ಔಷಧಗಳ ಎಂಆರ್ಪಿ ದರಗಳಲ್ಲಿ ಇಳಿಕೆ ಮಾಡಬೇಕು ಎಂದು ಔಷಧ ತಯಾರಕ ಮತ್ತು ಮಾರಾಟ ಸಂಸ್ಥೆಗಳಿಗೆ ಸರ್ಕಾರ ಸೂಚಿಸಿದೆ.
ಆಮದು ಸುಂಕ ಕಡಿಮೆಗೊಂಡಿರುವ ಅಥವಾ ಸುಂಕರಹಿತವಾಗಿ ಬಂದಿರುವ ಔಷಧಗಳ ದರಗಳನ್ನು ಇಳಿಸಬೇಕೆಂದು ರಾಷ್ಟ್ರೀಯ ಔಷಧ ಬೆಲೆನಿಗದಿ ಪ್ರಾಧಿಕಾರ (ಎನ್ಪಿಪಿಎ) ತಿಳಿಸಿದೆ.
ಫಾರ್ಮಾ ಕಂಪನಿಗಳು ಔಷಧ ಬೆಲೆಗಳ ಪರಿಷ್ಕೃತ ಪಟ್ಟಿಯನ್ನು ಬಿಡುಗಡೆ ಮಾಡುವಂತೆ ಸೂಚಿಸಲಾಗಿದೆ.
ಈ ಔಷಧ ಕಂಪನಿಗಳು ಪರಿಷ್ಕೃತ ಬೆಲೆ ಪಟ್ಟಿಯಲ್ಲಿ ಯಾವ್ಯಾವ ಔಷಧಗಳ ಬೆಲೆಗಳಲ್ಲಿ ಬದಲಾವಣೆಯಾಗಿದೆ ಎಂಬುದನ್ನು ಗುರುತಿಸಿ, ಆ ಪಟ್ಟಿಯನ್ನು ಡೀಲರ್ಗಳು, ರಾಜ್ಯ ಔಷಧ ಪ್ರಾಧಿಕಾರಗಳು, ಸರ್ಕಾರಿ ಪ್ರಾಧಿಕಾರಗಳಿಗೆ ಕಳುಹಿಸಬೇಕು ಎಂದು ಎನ್ಪಿಪಿಎ ತಿಳಿಸಿದೆ.
36 ಔಷಧಗಳಿಗೆ ತೆರಿಗೆ ವಿನಾಯಿತಿ
ಕೆಲ ತೀವ್ರ ತರಹದ ಆಸ್ತಮಾ ಕಾಯಿಲೆಗಳಿಗೆ ಬಳಸುವ ಮಿಪೋಲಿಜುಮ್ಯಾಬ್, ಲ್ಯೂಕೆಮಿಯಾ ಚಿಕಿತ್ಸೆಗೆ ನೀಡುವ ಅಸಿಮಿನಿಬ್ ಇತ್ಯಾದಿ ಅತ್ಯಗತ್ಯದ ಮತ್ತು ಜೀವ ರಕ್ಷಿಸುವ 36 ಔಷಧಗಳಿಗೆ 2025ರ ಬಜೆಟ್ನಲ್ಲಿ ತೆರಿಗೆ ವಿನಾಯಿತಿ ಘೋಷಿಸಲಾಗಿದೆ.
ಕಳೆದ ಹತ್ತು ವರ್ಷಗಳಿಂದ ದೇಶದ ಆರೋಗ್ಯಪಾಲನೆ ಕ್ಷೇತ್ರಕ್ಕೆ ಬಜೆಟ್ನಲ್ಲಿ ಅನುದಾನ ಶೇ 191ರಷ್ಟು ಏರಿದೆ. ಆಯುಷ್ಮಾನ್ ಭಾರತ್ ಪಿಎಂ ಜನ್ ಆರೋಗ್ಯ ಯೋಜನೆ, ಪಿಎಂ ಆಯುಷ್ಮಾನ್ ಭಾರತ್ ಹೆಲ್ತ್ ಇನ್ಫ್ರಾಸ್ಟ್ರಕ್ಚರ್ ಮಿಷನ್ ಇತ್ಯಾದಿ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ.
ಇದೇ ಬಜೆಟ್ನಲ್ಲಿ ದೇಶದ ಹೆಲ್ತ್ಕೇರ್ ಸಿಸ್ಟಂನ ಅಭಿವೃದ್ಧಿಗೊಳಿಸಲು ಮತ್ತು ಬಲಪಡಿಸಲು ಸರ್ಕಾರ 2025-26ರ ವರ್ಷಕ್ಕೆ ಒಂದು ಲಕ್ಷ ಕೋಟಿ ರೂ ಸಮೀಪದಷ್ಟು ಹಣ ನಿಯೋಜಿಸಿದೆ. ಜೊತೆಗೆ ಫಾರ್ಮಾ ಕ್ಷೇತ್ರದಲ್ಲಿ ಪಿಎಲ್ಐ ಸ್ಕೀಮ್ಗಾಗಿ 2,445 ಕೋಟಿ ರೂ ನೀಡಲಾಗಿದೆ.ದೇಶದ ವಿವಿಧೆಡೆ 200 ಡೇಕೇರ್ ಕ್ಯಾನ್ಸರ್ ಸೆಂಟರ್ಗಳನ್ನು ಸ್ಥಾಪಿಸುವ ಯೋಜನೆ ಘೋಷಿಸಲಾಗಿದೆ. ಮುಂದಿನ ಮೂರು ವರ್ಷದಲ್ಲಿ ದೇಶದ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲೂ ಡೇಕೇರ್ ಕ್ಯಾನ್ಸರ್ ಸೆಂಟರ್ಗಳನ್ನು ಸ್ಥಾಪಿಸುವ ಗುರಿ ಇಡಲಾಗಿದೆ.