ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದಿನಿಂದ ಚಾಂಪಿಯನ್ಸ್ ಟ್ರೋಫಿಗೆ ಅದ್ಧೂರಿ ಚಾಲನೆ ಸಿಕ್ಕಿದೆ. ಮೊದಲ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಿವೆ. ಆದರೆ ಈ ಪಂದ್ಯಕ್ಕೂ ಮುನ್ನ ಎದ್ದಿದ್ದ ವಿವಾದಕ್ಕೆ ತೆರೆ ಎಳೆಯುವ ಮೂಲಕ ಪಾಕಿಸ್ತಾನ ಕ್ರಿಕೆಟ್ ಮಂಡಳಿ ವಿಶ್ವ ಕ್ರಿಕೆಟ್ ಮುಂದೆ ಮುಜುಗರಕ್ಕೀಡಾಗುವುದರಿಂದ ಪಾರಾಗಿದೆ.
ಈ ಐಸಿಸಿ ಟೂರ್ನಿಗೆ ಆತಿಥ್ಯ ನೀಡುತ್ತಿರುವ ಕರಾಚಿ ಮತ್ತು ಲಾಹೋರ್ ಕ್ರೀಡಾಂಗಣಗಳಲ್ಲಿ ಪಿಸಿಬಿ 7 ತಂಡಗಳ ಧ್ವಜಗಳನ್ನು ಹಾರಿಸಿತ್ತು. ಆದರೆ ಇದರಲ್ಲಿ ಭಾರತದ ಧ್ವಜವನ್ನು ಹಾರಿಸಿರಲಿಲ್ಲ. ಇದರಿಂದ ಪಂದ್ಯಾವಳಿ ಆರಂಭಕ್ಕೂ ಮುನ್ನವೇ ವಿವಾದ ಎದ್ದಿತ್ತು. ಆದರೆ ಈಗ ಕರಾಚಿಯ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಲಾಗಿದೆ.
ತಲೆಕೆಳಗಾಗಿ ಹಾರಿದ್ದ ತ್ರಿವರ್ಣ ಧ್ವಜ
ಇದೀಗ ಕರಾಚಿಯ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತದ ಧ್ವಜವನ್ನು ಹಾರಿಸಲಾಗಿದೆಯಾದರೂ, ಈ ಮೊದಲು ಕರಾಚಿಯಲ್ಲಿ ತ್ರಿವರ್ಣ ಧ್ವಜವನ್ನು ತಲೆಕೆಳಗಾಗಿ ಹಾರಿಸಲಾಗಿತ್ತು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿಯೂ ವೈರಲ್ ಆಗಿತ್ತು.
ಉಡಾಫೆಯ ಉತ್ತರ ನೀಡಿದ್ದ ಪಿಸಿಬಿ
ವಾಸ್ತವವಾಗಿ ಈ ಹಿಂದೆ ಗಡಾಫಿ ಕ್ರೀಡಾಂಗಣದಲ್ಲಿ ಭಾರತದ ಧ್ವಜ ಹಾರಿಸದಿರುವ ಬಗ್ಗೆ ಗದ್ದಲ ಉಂಟಾದಾಗ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈ ಬಗ್ಗೆ ಸ್ಪಷ್ಟೀಕರಣವನ್ನು ನೀಡಿತ್ತು. ಇದರ ಹಿಂದಿನ ಕಾರಣವನ್ನು ವಿವರಿಸಿದ ಪಾಕ್ ಮಾಧ್ಯಮ, ‘2025 ರ ಚಾಂಪಿಯನ್ಸ್ ಟ್ರೋಫಿಯ ಪಂದ್ಯಗಳಲ್ಲಿ ಕೇವಲ ನಾಲ್ಕು ಧ್ವಜಗಳು ಮಾತ್ರ ಹಾರಿಸಬೇಕು ಎಂದು ಐಸಿಸಿ ಸೂಚಿಸಿತ್ತು. ಈ ನಾಲ್ಕು ಧ್ವಜಗಳಲ್ಲಿ ಒಂದು ಐಸಿಸಿಯದ್ದು, ಇನ್ನೊಂದು ಆತಿಥೇಯ ದೇಶದ್ದು ಹಾಗೂ ಉಳಿದ ಎರಡು ಧ್ವಜಗಳು ಯಾವ ತಂಡಗಳ ನಡುವೆ ಪಂದ್ಯ ನಡೆಯುತ್ತಿರುತ್ತದೊ ಆ ದೇಶಗಳದ್ದು ಎಂದು ಹೇಳಿಕೊಂಡಿತ್ತು. ಆದರೆ ಪಿಸಿಬಿಯ ಈ ಕಳಪೆ ವಿವರಣೆಯು ಇನ್ನಷ್ಟು ಗದ್ದಲವನ್ನು ಸೃಷ್ಟಿಸಿತ್ತು. ಏಕೆಂದರೆ ಕ್ರೀಡಾಂಗಣದಲ್ಲಿ 4 ಕ್ಕೂ ಹೆಚ್ಚು ಧ್ವಜಗಳನ್ನು ಹಾರಿಸಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಬಹುದಾಗಿದೆ.
ದುಬೈನಲ್ಲಿ ಟೀಂ ಇಂಡಿಯಾ ಪಂದ್ಯಗಳು
ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಚಾಂಪಿಯನ್ಸ್ ಟ್ರೋಫಿಗಾಗಿ ಟೀಂ ಇಂಡಿಯಾವನ್ನು ಪಾಕಿಸ್ತಾನಕ್ಕೆ ಕಳುಹಿಸದಿರಲು ಬಿಸಿಸಿಐ ನಿರ್ಧರಿಸಿತ್ತು. ಇದಾದ ನಂತರ ಐಸಿಸಿ, ಟೀಂ ಇಂಡಿಯಾದ ಎಲ್ಲಾ ಪಂದ್ಯಗಳನ್ನು ದುಬೈಗೆ ಸ್ಥಳಾಂತರಿಸಿತು.