ಮನುವಾದಿ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆಯನ್ನು ತಿರಸ್ಕರಿಸಿ: ಚೇತನ್ ಅಹಿಂಸಾ

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಮನುವಾದಿ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ದಲಿತ- ಸಮಾನತಾವಾದಿಗಳು ಮೊದಲು ತಿರಸ್ಕರಿಸಬೇಕು ಎಂದು ನಟ ಮತ್ತು ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಟೀಕೆ ಮಾಡಿರುವ ಅವರು, ‘ನಮ್ಮ ಸಮಾನತೆಯ ಚಳುವಳಿಗೆ ಐಡೆಂಟಿಟೇರಿಯನಿಸಮ್ (ಸ್ವ-ಭಾಷೆ/ ಸ್ವ-ಜಾತಿ/ ಸ್ವ-ಧರ್ಮ/ಸ್ವ-ಲಿಂಗ ಪ್ರೇಮ ಇತ್ಯಾದಿ) ಪ್ರಮುಖ ಅಪಾಯವಾಗಿದೆ. ಅಭ್ಯರ್ಥಿಯು ನಮ್ಮಂತೆಯೇ ಜಾತಿ/ ಧರ್ಮ/ಭಾಷೆ/ ಲಿಂಗದಲ್ಲಿ ಹುಟ್ಟಿದ್ದಾರೆ ಎಂಬ ಕಾರಣಕ್ಕೆ ನಾವು ಅವರನ್ನು ಬೆಂಬಲಿಸಬಾರದು. ನಾವು ಸಿದ್ದಾಂತದ ಆಧಾರದ ಮೇಲೆ ಬೆಂಬಲಿಸಬೇಕು. ಮನುವಾದಿ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ದಲಿತ- ಸಮಾನತಾವಾದಿಗಳು ಮೊದಲು ತಿರಸ್ಕರಿಸಬೇಕು.
ಮಲ್ಲಿಕಾರ್ಜುನ ಖರ್ಗೆ ದಲಿತರಾಗಿರಬಹುದು (ಆಕಸ್ಮತ್ತಾಗಿ).. ಆದರೆ, ಅವರು ಕಾಂಗ್ರೆಸ್ಸಿಗರು, ಮನುವಾದಿ, ಆಯ್ಕೆಯಿಂದ ಖರ್ಗೆ ಸಮಾನತಾವಾದಿಯಲ್ಲ. ಆದ್ದರಿಂದ ಅವರು ನಮ್ಮಲ್ಲಿ ಒಬ್ಬರಲ್ಲ. ಮಾನ್ಯವರ್ ಕಾನ್ಶೀರಾಮ್ ಅವರು ತಮ್ಮ ‘ಚಮಚಾಯುಗ’ ಪುಸ್ತಕದಲ್ಲಿ ವೈಯಕ್ತಿಕ ಬೆಳವಣಿಗೆಗಾಗಿ ಎಷ್ಟೋ ಬಹುಜನರು ಬ್ರಾಹ್ಮಣ್ಯದ ಕೈವಾಡಗಳ ಬಗ್ಗೆ ಬರೆದಿದ್ದಾರೆ. ಖರ್ಗೆ ಪ್ರಧಾನಿಯಾದರೆ ಪರಿವರ್ತನೆ ತರುತ್ತಾರಾ’ ಎಂದು ಪ್ರಶ್ನೆ ಮಾಡಿದ್ದಾರೆ.

ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡೆಯನ್ನೂ ವಿರೋಧ ಮಾಡಿರುವ ಚೇತನ್ ಅಹಿಂಸಾ ಅವರು, ಇಂದು ರೈತರ ದಿನದಂದು, 2020 ರಲ್ಲಿ ಬಿಜೆಪಿ ತಂದಿರುವ ರೈತ ವಿರೋಧಿ ಕಾನೂನನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು ಎಂದು ನಾವು ಸಮಾನತಾವಾದಿಗಳು ಒತ್ತಾಯಿಸುತ್ತೇವೆ. ರಾಜ್ಯ ಸರ್ಕಾರ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ತೆಗೆದುಹಾಕಿರುವುದು ಒಳ್ಳೆಯದು ಭೂಸುಧಾರಣೆ ತಿದ್ದುಪಡಿ ಕಾಯ್ದೆ ಮತ್ತು ಗೋಹತ್ಯೆ ವಿರೋಧಿ ಕಾಯ್ದೆ ಎರಡನ್ನೂ ರದ್ದುಗೊಳಿಸಬೇಕು. (ಭೂ ಸುಧಾರಣಾ ಕಾಯ್ದೆಯು ಕಾರ್ಪೊರೇಟ್‌ಗಳು ಮತ್ತು ಶ್ರೀಮಂತ ಕೈಗಾರಿಕೋದ್ಯಮಿಗಳ ಲಾಭಕ್ಕಾಗಿ ರೈತರ ಭೂಮಿಯನ್ನು ಕಸಿದುಕೊಂಡಿತು. ಗೋಹತ್ಯೆ ವಿರೋಧಿ ಕಾಯ್ದೆಯು ಗೋಹತ್ಯೆಗಾಗಿ ಗೋವುಗಳನ್ನು ಮಾರಾಟ ಮಾಡುವುದನ್ನು ನಿಷೇಧಿಸಿತು) ಎಂದು ಪೋಸ್ಟ್ ಮಾಡಿಕೊಂಡಿದ್ದಾರೆ.

‘ಸಿಎಂ ಸಿದ್ದರಾಮಯ್ಯ ಸಮವಸ್ತ್ರದಲ್ಲಿ ಹಿಜಾಬ್ ಹಾಕಿರುವುದು ಧಾರ್ಮಿಕ ಓಲೈಕೆ. ಸಿದ್ದರಾಮಯ್ಯನವರು ಮಾಡಬೇಕಾಗಿರುವುದು ಸಮವಸ್ತ್ರದಲ್ಲಿ ಬೇಡವಾದದ್ದನ್ನು ವಿಸ್ತರಿಸುವುದು. ಹಿಜಾಬ್, ಬಿಂದಿ/ತಿಲಕ/ ಪೇಟ/ಇಷ್ಟಲಿಂಗ/ಕ್ರಾಸ್/ಜನಿವಾರ/ಹೂಗಳು/ಎಲ್ಲಾ ಧಾರ್ಮಿಕ-ಸಾಂಸ್ಕೃತಿಕ ಗುರುತುಗಳು. ಸಮವಸ್ತ್ರದಲ್ಲಿ ಏಕರೂಪತೆಯನ್ನು ಕಾಪಾಡಿಕೊಳ್ಳಬೇಕು’ ಎಂದು ಸಂದೇಶವನ್ನು ಹಂಚಿಕೊಂಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!