ಕ್ಷಮೆಯಾಚನೆ ತಿರಸ್ಕಾರ: ಬಾಬಾ ರಾಮದೇವ್​ ವಿರುದ್ಧ ಗುಡುಗಿದ ಸುಪ್ರೀಂಕೋರ್ಟ್​!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪತಂಜಲಿ ಆಯುರ್ವೇದ ಕಂಪನಿಯ ಜಾಹೀರಾತು ಪ್ರಕರಣಕ್ಕೆ ಸಂಬಂಧಿಸಿದಂತೆ ಯೋಗ ಗುರು ಬಾಬಾ ರಾಮದೇವ್ ಮತ್ತು ಅವರ ಆಪ್ತ ಹಾಗೂ ಪತಂಜಲಿ ಕಂಪನಿಯ ಮ್ಯಾನೇಜಿಂಗ್​ ಡೈರೆಕ್ಟರ್​ ಆಚಾರ್ಯ ಬಾಲಕೃಷ್ಣರ ‘ಬೇಷರತ್​ ಕ್ಷಮೆ’ಯನ್ನು ಸುಪ್ರೀಂಕೊರ್ಟ್​ ಬುಧವಾರ ತಿರಸ್ಕರಿಸಿದೆ .

ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರ ಪೀಠವು, ಪತಂಜಲಿ ಕಂಪನಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು.ನಿಮ್ಮ ಕ್ರಮಗಳು ಉದ್ದೇಶಪೂರ್ವಕ ಮತ್ತು ಪುನರಾವರ್ತಿತ ಉಲ್ಲಂಘನೆಯಾಗಿದೆ. ಹೀಗಾಗಿ ಸಲ್ಲಿಸಿರುವ ಅಫಿಡವಿಟ್‌ನಿಂದ ನಾವು ಸಮಾಧಾನಗೊಂಡಿಲ್ಲ ಎಂದು ಕೋರ್ಟ್ ಆಕ್ರೋಶ ಹೊರ ಹಾಕಿದೆ.

ಇಷ್ಟು ದಿನ ಪತಂಜಲಿ ವಿರುದ್ಧ ಕ್ರಮಕೈಗೊಳ್ಳದ ಉತ್ತರಾಖಂಡ್ ಪರವಾನಗಿ ಪ್ರಾಧಿಕಾರದ ವಿರುದ್ಧವೂ ನ್ಯಾಯಾಲಯ ಆಕ್ರೋಶ ವ್ಯಕ್ತಪಡಿಸಿತು ಮತ್ತು ಈ ವಿಷಯದಲ್ಲಿ ಕೇಂದ್ರದ ಉತ್ತರದಿಂದ ನಾವು ತೃಪ್ತರಾಗಿಲ್ಲ ಎಂದಿದೆ .

ಪತಂಜಲಿ ಸಂಸ್ಥಾಪಕರ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ, ಜನರು ಜೀವನದಲ್ಲಿ ತಪ್ಪುಗಳನ್ನು ಮಾಡುವುದು ಸಹಜ ಎಂದರು. ಆದರೆ, ಅಂತಹ ತಪ್ಪುಗಳಿಂದ ಬೇರೆಯವರು ತೊಂದರೆ ಅನುಭವಿಸಬೇಕಾಗುತ್ತದೆ ಸುಪ್ರೀಂ ಕೋರ್ಟ್ ವಕೀಲರನ್ನು ಛೀಮಾರಿ ಹಾಕಿತು. ನಾವೇನು ಕುರುಡರಲ್ಲ ಮತ್ತು ಈ ಪ್ರಕರಣದಲ್ಲಿ ಉದಾರವಾಗಿರಲು ನಾವು ಬಯಸುವುದಿಲ್ಲ ಎಂದು ಕೋರ್ಟ್​ ಕಿಡಿಕಾರಿತು.

ಇಂದಿನ ವಿಚಾರಣೆಯ ಸಂದರ್ಭದಲ್ಲಿ ವಕೀಲ ರೋಹಟಗಿ ಅವರು ಪತಂಜಲಿ ಮತ್ತು ಅದರ ಎಂಡಿ ಆಚಾರ್ಯ ಬಾಲಕೃಷ್ಣ ಅವರು ಸಲ್ಲಿಸಿದ ಎರಡು ಅಫಿಡವಿಟ್‌ಗಳನ್ನು ಮತ್ತು ಬಾಬಾ ರಾಮ್‌ದೇವ್ ಅವರ ಇನ್ನೊಂದು ಅಫಿಡವಿಟ್‌ಗಳನ್ನು ಓದಿದರು. ಆದರೆ, ಅವರ ಕ್ಷಮಾಪಣೆಯು ಕೇವಲ ಕಾಗದಕ್ಕೆ ಮಾತ್ರ ಸೀಮಿತವಾಗಿದೆ. ನಾವಿದನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತೇವೆ. ಇದು ಉದ್ದೇಶಪೂರ್ವಕ ಉಲ್ಲಂಘನೆ ಎಂದು ನಾವು ಪರಿಗಣಿಸುತ್ತೇವೆ ಎಂದು ಕೋರ್ಟ್​ ಹೇಳಿತು. ಮುಂದಿನ ಕ್ರಮಕ್ಕೆ ಸಿದ್ಧರಾಗಿರಿ ಎಂದು ಎಚ್ಚರಿಕೆ ನೀಡಿತು.

ವಿಚಾರಣೆ ವೇಳೆ ಪೀಠವು, ಬಾಬಾ ರಾಮ್‌ದೇವ್ ಅವರನ್ನು ತರಾಟೆಗೆ ತೆಗೆದುಕೊಂಡಿತು. ಅವರು ನ್ಯಾಯಾಲಯಕ್ಕೆ ಹಾಜರಾಗುವುದರಿಂದ ವಿನಾಯಿತಿ ಕೋರಿ, ವಿದೇಶಿ ಪ್ರಯಾಣ ಉಲ್ಲೇಖಿಸಿ ಮತ್ತು ಟಿಕೆಟ್ ಸಹಿತ ಅಫಿಡವಿಟ್‌ನಲ್ಲಿ ಸಲ್ಲಿಸಿದರು. ಆದರೆ ಕೋರ್ಟ್‌ಗೆ ನೀಡುವ ಮೊದಲು ಅದನ್ನು ಮಾಧ್ಯಮಗಳಿಗೆ ಪ್ರಕಟಿಸಿದೆ. ಇದು ಪ್ರಚಾರ ಪಡೆಯುವುದಲ್ಲದೇ ಇನ್ನೇನು ಎಂದು ಪ್ರಶ್ನಿಸಿತು.

ಪತಂಜಲಿ ಉತ್ಪನ್ನಗಳಿಗೆ ಪರವಾನಗಿ ನೀಡಿದ್ದಕ್ಕಾಗಿ ಉತ್ತರಾಖಂಡ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಪೀಠ, ಮೂವರು ಔಷಧಿ ಪರವಾನಗಿ ಅಧಿಕಾರಿಗಳನ್ನು ತಕ್ಷಣವೇ ಅಮಾನತುಗೊಳಿಸಬೇಕು ಎಂದು ಅದೇಶಿಸಿತು. ಪತಂಜಲಿ ನಿಯಮ ಉಲ್ಲಂಘಿಸುವ ವೇಳೆ ನಿವೇನು ಮಾಡುತ್ತಿದ್ದೀರಿ ಕೋರ್ಟ್ ಮಧ್ಯಪ್ರವೇಶಿಸುವ ತನಕ ಕಾಯುತ್ತಿದ್ದೀರಾ ಎಂದು ಕೇಳಿತು. ಉತ್ತರಾಖಂಡ ರಾಜ್ಯ ಪರವಾನಗಿ ಪ್ರಾಧಿಕಾರದ ಉತ್ತರಾಖಂಡ ಜಂಟಿ ನಿರ್ದೇಶಕ ಮಿಥಿಲೇಶ್ ಕುಮಾರ್ ಮುಂದಿನ ಕ್ರಮದ ಭರವಸೆ ನೀಡಿದರು. ಪ್ರಕರಣದ ಮುಂದಿನ ವಿಚಾರಣೆ ಏಪ್ರಿಲ್ 16 ರಂದು ನಡೆಯಲಿದ್ದು, ಬಾಬಾ ರಾಮ್‌ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರ ಮುಂದೆ ಹಾಜರಾಗುವಂತೆ ಸುಪ್ರೀಂ ಕೋರ್ಟ್ ಹೇಳಿದೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!