ಹೊಸದಿಗಂತ ಡಿಜಿಟಲ್ ಡೆಸ್ಕ್
ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ನಳಿನಿ ಶ್ರೀಹರನ್ ಮತ್ತು ಇತರ ಐವರು ಅಪರಾಧಿಗಳನ್ನು ಸುಪ್ರೀಂಕೋರ್ಟ್ ಬಿಡುಗಡೆ ಮಾಡಿರುವ ತೀರ್ಪನ್ನು ಕಾಂಗ್ರೆಸ್ ಪಕ್ಷ ಟೀಕಿಸಿದೆ.
ಈ ಕುರಿತು ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಗ್ವಿ ಸುದ್ದಿಗೋಷ್ಠಿ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ರಾಜೀವ್ ಗಾಂಧಿ ಹಂತಕರ ಕುರಿತು ಸೋನಿಯಾ ಗಾಂಧಿ ತಳೆದಿದ್ದ ನಿಲುವಿಗೆ ಕಾಂಗ್ರೆಸ್ ಬದ್ಧವಾಗಿಲ್ಲ.ಈ ಬಗ್ಗೆ ಸೋನಿಯಾ ಗಾಂಧಿಯವರೊಂದಿಗೆ ಭಿನ್ನಾಭಿಪ್ರಾಯವಿದೆ ಎಂದು ಹೇಳಿದ್ದಾರೆ.
ಸೋನಿಯಾ ಗಾಂಧಿ ವೈಯುಕ್ತಿಕ ನಿಲುವು ಹೊಂದಿದ್ದಾರೆ. ನಳಿನಿ ಕುರಿತು ಸಹಾನೂಭೂತಿ ಹೊಂದಿದ್ದರು. ನಳಿನಿ ಬಿಡುಗಡೆಗೆ ಸೋನಿಯಾ ಗಾಂಧಿ ಕೂಡ ಗ್ರೀನ್ ಸಿಗ್ನಲ್ ನೀಡಿದ್ದರು. ಆದರೆ ಈ ವಿಚಾರದಲ್ಲಿ ಸೋನಿಯಾ ಗಾಂಧಿ ಅಭಿಪ್ರಾಯವನ್ನು ಪಕ್ಷ ಒಪ್ಪುವುದಿಲ್ಲ ಎಂದು ಅಭಿಷೇಖ್ ಮನು ಸಿಂಗ್ವಿ ಹೇಳಿದ್ದಾರೆ.
ಈ ಸಂದರ್ಭದಲ್ಲಿ, ಕಾಂಗ್ರೆಸ್ ದೃಷ್ಟಿಕೋನವು ಕೇಂದ್ರ ಸರ್ಕಾರದಂತೆಯೇ ಇದೆ. ಪಕ್ಷವು ಸೋನಿಯಾ ಗಾಂಧಿಯವರ ಅಭಿಪ್ರಾಯವನ್ನು ಒಪ್ಪುವುದಿಲ್ಲ, ಆ ನಿಲುವನ್ನು ಎಂದಿಗೂ ಒಪ್ಪಿಲ್ಲ. ವರ್ಷಗಳಿಂದ ಈ ಅಭಿಪ್ರಾಯವನ್ನು ಸ್ಪಷ್ಟಪಡಿಸಿದೆ ಎಂದು ಅಭಿಷೇಕ್ ಮನು ಸಿಂಘ್ವಿ ಹೇಳಿದ್ದಾರೆ.
ಮೇ 21, 1991 ರಂದು ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂ (LTTE) ಗುಂಪಿನ ಮಹಿಳಾ ಆತ್ಮಹತ್ಯಾ ಬಾಂಬರ್ ರಾಜೀವ್ ಗಾಂಧಿ ಅವರನ್ನು ಹತ್ಯೆ ಮಾಡಿದ್ದಳು. ಹತ್ಯೆ ಪ್ರಕರಣದಲ್ಲಿ ಏಳು ಅಪರಾಧಿಗಳಿಗೆ ಮರಣದಂಡನೆ ವಿಧಿಸಲಾಯಿತು. 2000 ರಲ್ಲಿ, ರಾಜೀವ್ ಗಾಂಧಿ ಅವರ ಪತ್ನಿ ಮತ್ತು ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಮಧ್ಯಸ್ಥಿಕೆಯ ಮೇಲೆ ನಳಿನಿ ಶ್ರೀಹರನ್ ಅವರ ಶಿಕ್ಷೆಯನ್ನು ಜೀವಾವಧಿಗೆ ಇಳಿಸಲಾಯಿತು.
ಗರ್ಭಿಣಿಯಾಗಿದ್ದ ನಳಿನಿಯನ್ನು ಬಂಧಿಸಿದಾಗ ಆಕೆಗೆ ಕ್ಷಮೆ ನೀಡಬೇಕೆಂದು ಸೋನಿಯಾ ಗಾಂಧಿ ನ್ಯಾಯಾಲಯವನ್ನು ಒತ್ತಾಯಿಸಿದ್ದರು. ಸೋನಿಯಾ ಗಾಂಧಿ ಅವರು ವರ್ಷಗಳ ಹಿಂದೆಯೇ ಹೇಳಿಕೆ ನೀಡಿದ್ದಾರೆ ಎಂದು ಸಿಂಘ್ವಿ ಹೇಳಿದರು.
ನಮ್ಮ ನಿಲುವಿನ ಬಗ್ಗೆ ನಾವು ಸ್ಥಿರವಾಗಿದ್ದೇವೆ. ಇದು ಸಾಂಸ್ಥಿಕ ವಿಷಯವಾಗಿದೆ. ಮಾಜಿ ಪ್ರಧಾನಿಯ ಹತ್ಯೆಯಲ್ಲಿ ರಾಷ್ಟ್ರದ ಸಾರ್ವಭೌಮತೆ, ಸಮಗ್ರತೆ ಮತ್ತು ಗುರುತನ್ನು ಒಳಗೊಂಡಿರುತ್ತದೆ ಎಂದು ಕಾಂಗ್ರೆಸ್ ನಾಯಕ ಹೇಳಿದರು.