ಜೈಲಿನಲ್ಲಿರುವ ವಿಚಾರಣಾಧೀನ ಕೈದಿಗಳ ಬಿಡುಗಡೆ: ಪಿಐಎಲ್ ವಜಾಗೊಳಿಸಿದ ದೆಹಲಿ ಹೈಕೋರ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜೈಲುಗಳಲ್ಲಿ ಕೈದಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿಚಾರಣಾಧೀನ ಕೈದಿಗಳನ್ನು ಬಿಡುಗಡೆ ಮಾಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ.

ಈ ಬಗ್ಗೆ ಗೌತಮ್ ಕುಮಾರ್ ಲ್ಹಾ ಅವರು ಅರ್ಜಿ ಸಲ್ಲಿಸಿದ್ದು, ಅರ್ಜಿ ವಿಚಾರಣೆಗೆ ಕೈಗೆತ್ತಿಕೊಂಡ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಅವರ ನೇತೃತ್ವದ ಪೀಠ ಈ ವಿಷಯ ಈಗಾಗಲೇ ಸುಪ್ರೀಂ ಕೋರ್ಟ್‌ನಲ್ಲಿದೆ. ಅದನ್ನು ಮತ್ತೊಮ್ಮೆ ಪುರಸ್ಕರಿಸುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತು.

ದೆಹಲಿಯಲ್ಲಿ ಒಟ್ಟು ಮೂರು ಜೈಲುಗಳಿದ್ದು, ಇಲ್ಲಿನ ಒಟ್ಟು ಸಾಮರ್ಥ್ಯ 10,206 ಕೈದಿಗಳು. ಆದರೆ 2021ರ ಮಾಹಿತಿ ಪ್ರಕಾರ ಈ ಜೈಲುಗಳಲ್ಲಿ ಒಟ್ಟು 19,500 ಕೈದಿಗಳಿದ್ದಾರೆ. ಇವರಲ್ಲಿ ವಿಚಾರಣಾಧೀನ ಕೈದಿಗಳ ಪ್ರಮಾಣ ಶೇ 83.33 ರಷ್ಟಿದೆ. ಇದು ರಾಷ್ಟ್ರೀಯ ಸರಾಸರಿಗಿಂತಲೂ ಹೆಚ್ಚು.

ತುಂಬಿ ತುಳುಕುತ್ತಿರುವ ಜೈಲಿನಲ್ಲಿರುವ ವಿಚಾರಣಾಧೀನ ಕೈದಿಗಳ ಹಿತಕ್ಕಾಗಿ ಈ ಅರ್ಜಿ ಸಲ್ಲಿಕೆಯಾಗಿದೆ. ಸಮಿತಿಯೊಂದನ್ನು ರಚಿಸಿ, ಕನಿಷ್ಠ ತಿಂಗಳಿಗೆ ಒಂದು ಸಭೆಯನ್ನಾದರೂ ನಡೆಸುವ ಮೂಲಕ ವಿಚಾರಣೆ ಎದುರಿಸುತ್ತಿರುವ ಕೈದಿಗಳನ್ನು ಜಾಮೀನು ಮೇಲೆ ಬಿಡುಗಡೆ ಮಾಡಬಹುದು ಎಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!