ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಪಾಕಿಸ್ತಾನದ ನಡುವೆ ದ್ವೇಷ, ಸೇಡು, ಜಗಳದ ನಡುವೆ ಪ್ರೀತಿ, ಭಾವನಾತ್ಮಕ ಘಟನೆಗಳು ಗಮನ ಸೆಳೆಯುತ್ತವೆ.
ಅಮೃತಸರದ ಅಟ್ಟಾರಿ ಗಡಿ ಇಂದು ಅಕ್ರಮವಾಗಿ ತಂಗಿದ್ದಕ್ಕಾಗಿ ಭಾರತದ ವಿವಿಧ ಜೈಲುಗಳಲ್ಲಿ ಶಿಕ್ಷೆ ಅನುಭವಿಸಿದ ಐವರು ಪಾಕಿಸ್ತಾನಿ ಪ್ರಜೆಗಳು ತಮ್ಮ ದೇಶಕ್ಕೆ ಮರಳಿದರು.
ಈ ಸಂದರ್ಭ ಸೆರೆವಾಸದ ಅವಧಿಯಲ್ಲಿನ ಮಾನವೀಯ ಉಪಚರ ಹಾಗೂ ಜೈಲಿನಿಂದ ಬಿಡುಗಡೆಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.
ಭಾರತ ಸರ್ಕಾರ ಬಿಡುಗಡೆ ಮಾಡಿದವರಲ್ಲಿ ಹರಿಯಾಣದಲ್ಲಿರುವ ತನ್ನ ಸಂಬಂಧಿಕರ ಪುತ್ರಿಯನ್ನು ಮದುವೆಯಾಗಲು ದೇಶದೊಳಗೆ ನುಸುಳಿದ್ದ ‘WhatsApp ಪ್ರೇಮಿ’ ಅಜ್ಮಲ್ ಹುಸೇನ್ ಸೇರಿದ್ದಾರೆ.
2022 ರಿಂದ ಪಂಜಾಬ್‌ನ ತರ್ನ್ ತರನ್ ಜೈಲಿನಲ್ಲಿದ್ದ ಹುಸೇನ್, ನನ್ನ ಲವರ್ ಭೇಟಿಯಾಗಲು ಅಕ್ರಮವಾಗಿ ಭಾರತಕ್ಕೆ ಬಂದದ್ದು ತಪ್ಪು ಎಂದು ಒಪ್ಪಿಕೊಂಡಿದ್ದಾರೆ.
ಪಾಕಿಸ್ತಾನ ಹಳ್ಳಿಯೊಂದರಿಂದ ಬಂದಿದ್ದೇನೆ. ದೂರದ ಸಂಬಂಧಿಕರ ಪುತ್ರಿಯೊಂದಿಗೆ ಧೀರ್ಘ ಕಾಲದಿಂದ ಸಂಬಂಧ ಹೊಂದಿದ್ದು, ವಾಟ್ಸಾಪ್ ಮೂಲಕ ಸಂದೇಶಗಳನ್ನು ಹಂಚಿಕೊಳ್ಳುತ್ತಿದ್ದಾಗಿ ತಿಳಿಸಿದರು.
ಬೇಹುಗಾರಿಕೆ ಪ್ರಕರಣದಲ್ಲಿ ಅಲ್ವಾರ್ ಜೈಲಿನಲ್ಲಿ 17 ವರ್ಷಗಳ ಜೈಲುವಾಸ ಅನುಭವಿಸಿ ಹಿಂದಿರುಗುತ್ತಿದ್ದ ಮತ್ತೋರ್ವ ಖೈದಿ ಜಾಫರ್ ಹುಸೇನ್ ಕೂಡ ನಿರಾಳವಾದಂತೆ ಕಂಡರು. ಭಾರತದ ಜೈಲು ಅಧಿಕಾರಿಗಳು ನಮ್ಮನ್ನು ಚೆನ್ನಾಗಿ ನಡೆಸಿಕೊಂಡರು ಎಂದು ಪಾಕಿಸ್ತಾನದ ಪಂಜಾಬ್‌ನ ಫೈಸಲಾಬಾದ್‌ನ ನಿವಾಸಿ ಹೇಳಿದರು.
ಬಿಡುಗಡೆಗೊಂಡ ಮತ್ತೊಬ್ಬ ಖೈದಿ ಮಸ್ರೂರ್, ಜೈಲಿನಲ್ಲಿ ಉತ್ತಮ ಉಪಚಾರಕ್ಕಾಗಿ ಭಾರತೀಯ ಅಧಿಕಾರಿಗಳಿಗೆ ಧನ್ಯವಾದ ಅರ್ಪಿಸಿದರು. ಅಪರಾಧಿಯಾಗಿದ್ದರೂ, ಭಾರತದಲ್ಲಿ ನನಗೆ ಸಾಕಷ್ಟು ಪ್ರೀತಿ ಸಿಕ್ಕಿತು. ನಾನು ವಿದೇಶದಲ್ಲಿ ಇದ್ದೇನೆ ಎಂದು ಯಾವತ್ತೂ ಅಂದುಕೊಂಡಿರಲಿಲ್ಲ ಎಂದು ಅವರು ತಿಳಿಸಿದರು.