ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾಗತಿಕ ಮಾರುಕಟ್ಟೆಯಲ್ಲಿನ ಏರಿಳಿತ ಹಾಗೂ ಪಶ್ಚಿಮ ಏಷ್ಯಾದ ಯುದ್ಧದಂತಹ ಸಂಕೀರ್ಣ ಸವಾಲುಗಳ ನಡುವೆಯೂ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL), 2026ರ ಮಾರ್ಚ್ 31ಕ್ಕೆ ಕೊನೆಯಾದ ಆರ್ಥಿಕ ವರ್ಷದಲ್ಲಿ ಐತಿಹಾಸಿಕ ಸಾಧನೆ ಮಾಡಿದೆ. ಕಂಪನಿಯು ತನ್ನ ವಾರ್ಷಿಕ ಏಕೀಕೃತ ನಿವ್ವಳ ಲಾಭದಲ್ಲಿ 95,754 ಕೋಟಿ ರೂಪಾಯಿ ದಾಖಲಿಸುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದೆ.
ಈ ಆರ್ಥಿಕ ವರ್ಷದಲ್ಲಿ ರಿಲಯನ್ಸ್ ಸಂಸ್ಥೆಯ ಒಟ್ಟು ಆದಾಯವು ಬರೋಬ್ಬರಿ 11,75,919 ಕೋಟಿ ರೂಪಾಯಿಗೆ ತಲುಪಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 9.8 ರಷ್ಟು ಬೆಳವಣಿಗೆಯನ್ನು ಸೂಚಿಸುತ್ತದೆ. ವಿಶೇಷವೆಂದರೆ, ನಾಲ್ಕನೇ ತ್ರೈಮಾಸಿಕದಲ್ಲಿ (ಜನವರಿ-ಮಾರ್ಚ್ 2026) ಕಂಪನಿಯು 20,589 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದೆ.
ಕಂಪನಿಯ ಅದ್ಭುತ ಪ್ರದರ್ಶನದ ಹಿನ್ನೆಲೆಯಲ್ಲಿ, ಹೂಡಿಕೆದಾರರಿಗೆ ಪ್ರತಿಫಲ ನೀಡಲು ರಿಲಯನ್ಸ್ ಮುಂದಾಗಿದೆ. ಹತ್ತು ರೂಪಾಯಿ ಮುಖಬೆಲೆಯ ಪ್ರತಿ ಷೇರಿಗೆ 6 ರೂಪಾಯಿ ಲಾಭಾಂಶ ನೀಡುವುದಾಗಿ ಕಂಪನಿ ಘೋಷಿಸಿದೆ.
ಜಿಯೋ ಪ್ಲಾಟ್‌ಫಾರ್ಮ್ಸ್: ಜಿಯೋ ಆದಾಯದಲ್ಲಿ ಶೇ. 14.7 ರಷ್ಟು ಏರಿಕೆ ಕಂಡಿದ್ದು, ಪ್ರತಿ ಬಳಕೆದಾರರಿಂದ ಬರುವ ಸರಾಸರಿ ಆದಾಯ (ARPU) 214 ರೂಪಾಯಿಗೆ ಏರಿಕೆಯಾಗಿದೆ. 52.4 ಕೋಟಿ ಚಂದಾದಾರರೊಂದಿಗೆ ಜಿಯೋ ಈಗ ‘ಎಐ’ ಯುಗದತ್ತ ಹೆಜ್ಜೆ ಹಾಕುತ್ತಿದೆ.
ಇಶಾ ಅಂಬಾನಿ ನೇತೃತ್ವದ ರೀಟೇಲ್ ವಿಭಾಗವು 3.70 ಲಕ್ಷ ಕೋಟಿ ರೂಪಾಯಿ ಆದಾಯ ಗಳಿಸಿದೆ. 1,200ಕ್ಕೂ ಹೆಚ್ಚು ನಗರಗಳಲ್ಲಿ ಹರಡಿರುವ ಈ ಜಾಲವು ಗ್ರಾಹಕರ ನೆಚ್ಚಿನ ತಾಣವಾಗಿ ಹೊರಹೊಮ್ಮಿದೆ.
ತೈಲ ಮತ್ತು ರಾಸಾಯನಿಕ (O2C): ಜಾಗತಿಕ ಅಸ್ಥಿರತೆಯ ನಡುವೆಯೂ ಈ ವಿಭಾಗವು ಶೇ. 5.7 ರಷ್ಟು ಬೆಳವಣಿಗೆ ದಾಖಲಿಸಿದೆ.
“ಅಂತರರಾಷ್ಟ್ರೀಯ ಮಟ್ಟದ ಉದ್ವಿಗ್ನತೆ ಮತ್ತು ಇಂಧನ ಬೆಲೆಗಳ ಏರಿಳಿತದ ನಡುವೆಯೂ ರಿಲಯನ್ಸ್ ಬಲವಾಗಿ ಬೆಳೆದಿದೆ. ಜಿಯೋ ಪ್ಲಾಟ್‌ಫಾರ್ಮ್ ಲಿಸ್ಟಿಂಗ್ ನತ್ತ ಸಾಗುತ್ತಿರುವುದು ಒಂದು ಪ್ರಮುಖ ಮೈಲಿಗಲ್ಲಾಗಲಿದೆ. ನಮ್ಮ ಹೊಸ ಇಂಧನ ಗಿಗಾ-ಕಾರ್ಖಾನೆಗಳು ಭಾರತದ ಇಂಧನ ಭದ್ರತೆಗೆ ಶಕ್ತಿಯಾಗಲಿವೆ,” ಎಂದು ರಿಲಯನ್ಸ್ ಅಧ್ಯಕ್ಷ ಮುಕೇಶ್ ಅಂಬಾನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸುಮಾರು 1.44 ಲಕ್ಷ ಕೋಟಿ ರೂಪಾಯಿ ಬಂಡವಾಳ ವೆಚ್ಚದೊಂದಿಗೆ, ರಿಲಯನ್ಸ್ ಮುಂದಿನ ದಿನಗಳಲ್ಲಿ 5G ಮೂಲಸೌಕರ್ಯ, ಹಸಿರು ಇಂಧನ ಮತ್ತು ಎಐ ತಂತ್ರಜ್ಞಾನದ ಮೇಲೆ ಹೆಚ್ಚಿನ ಗಮನ ಹರಿಸುತ್ತಿದೆ. ಇದು ಭಾರತದ ಆರ್ಥಿಕತೆಯಲ್ಲಿ ರಿಲಯನ್ಸ್ ಹೊಂದಿರುವ ಅಧಿಪತ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ.



