ಸಿಎಂ ಸಿದ್ದರಾಮಯ್ಯಗೆ ಮತ್ತೆ ರಿಲೀಫ್‌: ಸೆ.2ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್‌

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮುಡಾ ಹಗರಣದಲ್ಲಿ ಸಿಎಂ ಸಿದ್ಧರಾಮಯ್ಯ ವಿರುದ್ಧದ ಪ್ರಾಸಿಕ್ಯೂಷನ್ ಸಂಬಂಧ ವಾದ ಆಲಿಸಿದ ಹೈಕೋರ್ಟ್‌ ಸೆ.2ಕ್ಕೆ ಅರ್ಜಿ ವಿಚಾರಣೆಯನ್ನು ಮುಂದೂಡಿದೆ.

ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಸಿಎಂ ಸಿದ್ಧರಾಮಯ್ಯ ರಿಟ್ ಅರ್ಜಿಯನ್ನು ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠವು ಸೆಪ್ಟೆಂಬರ್.2ರ ಮಧ್ಯಾಹ್ನ 2.30ಕ್ಕೆ ವಿಚಾರಣೆಯನ್ನು ಮುಂದೂಡಿತು.

ಸಿಎಂ ಸಿದ್ಧರಾಮಯ್ಯ ಪರವಾಗಿ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ತಮ್ಮ ವಾದವನ್ನು ಮುಂಡಿಸಿದ್ದರು.

ದೂರುದಾರ ಪ್ರದೀಪ್ ಕುಮಾರ್ ಪರವಾಗಿ ಹಿರಿಯ ವಕೀಲ ಪ್ರಭುಲಿಂಗ ನಾದವಗಿ ಅವರು ಆರೋಪಿಗಳಿಗೆ ನೊಟೀಸ್ ನೀಡಿ ತನಿಖೆಗೆ ಅವಕಾಶ ನೀಡಬಾರದು. ನೊಟೀಸ್ ನೀಡಿದರೇ ತನಿಖೆಯೇ ಪೂರ್ವಗ್ರಾಹಕ್ಕೊಳಗಾಗಲಿದೆ. 17ಎ ಹಂತದಲ್ಲಿ ರಾಜ್ಯಪಾಲರ ಕ್ರಮ ಪ್ರಶ್ನಿಸಲು ಅವಕಾಶವಿಲ್ಲ. ಎಫ್‌ಐಆರ್ ದಾಖಲಾದ ಬಳಿಕ ಆರೋಪಿಗೆ ಅದನ್ನು ಪ್ರಶ್ನಿಸುವ ಹಕ್ಕು ಬರಲಿದೆ ಎಂದು ವಾದಿಸಿದರು.

ಸಂವಿಧಾನದ 163ರಡಿ ಸಿಎಂ ಕೂಡ ಕ್ಯಾಬಿನೆಟ್ ಭಾಗವಾಗಿದ್ದಾರೆ. ಹೀಗಾಗಿ ಸಿಎಂ ಹೊರತಾದ ಕ್ಯಾಬಿನೆಟ್ ಇರಲು ಸಾಧ್ಯವಿಲ್ಲ. ಹೀಗಾಗಿ ಕ್ಯಾಬಿನೆಟ್ ನಿರ್ಣಯವನ್ನು ರಾಜ್ಯಪಾಲರು ಪರಿಗಣಿಸಬೇಕಿಲ್ಲ ಎಂದು ವಾದಿಸಿದರು.

ಹೈಕೋರ್ಟ್ ನ್ಯಾಯಪೀಠದ ಮುಂದೆ ಹಿರಿಯ ವಕೀಲ ಪ್ರಭುಲಿಂಗ ನಾದವಗಿ ಅವರು ಆರ್ ಎಸ್ ನಾಯಕ್ ಪ್ರಕರಣ, ಸುಪ್ರೀಂ ಕೋರ್ಟ್ ಎಕೆ ಕ್ರೈ ಪಾಕ್ ಕೇಸ್ ಉಲ್ಲೇಖಗಳನ್ನು ಕೂಡ ಮುಂದಿಟ್ಟು ವಾದಿಸಿದರು.

ಒಂದೆಡೆ ಅಕ್ರಮವಾಗಿಲ್ಲ ಎಂದಿದ್ದಾರೆ. ಮತ್ತೊಂದೆಡೆ ನಿವೃತ್ತ ನ್ಯಾಯಮೂರ್ತಿ ಹಾಗೂ ಐಎಎಸ್ ಅಧಿಕಾರಿ ನೇತೃತ್ವದಲ್ಲಿ ಮುಡಾ ಹಗರಣದ ತನಿಖೆಗೆ ಸಮಿತಿ ರಚಿಸಿದ್ದಾರೆ. ಇದರನ್ನೇ ರಾಜ್ಯಪಾಲರು ಸಿಎಂ ವಿರುದ್ಧದ ಮುಡಾ ಹಗರಣ ಸಂಬಂಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವಾಗ ಉಲ್ಲೇಖಿಸಿದರು.

ಬಳಿಕ ದೂರುದಾರ ಟಿಜೆ ಅಬ್ರಾಹಂ ಅವರ ಪರವಾಗಿ ವಕೀಲ ರಂಗನಾಥ್ ರೆಡ್ಡಿ ವಾದ ಆರಂಭಿಸಿದರು. ಮುಡಾ ಸೈಟ್ ಹಂಚಿಕೆಗಾಗಿ ಡಿನೋಟಿಫಿಕೇಷನ್ ಆದಾಗ ಸಿದ್ಧರಾಮಯ್ಯ ಅವರು ಡಿಸಿಎಂ ಆಗಿದ್ದರು. ಭೂ ಪರಿವರ್ತನೆ ಆದಾಗಲೂ ಸಿದ್ಧರಾಮಯ್ಯ ಡಿಸಿಎಂ ಆಗಿದ್ದರು. 50:50 ಸೈಟ್ ಹಂಚಿಕೆ ಮಾಡುವಂತೆ ಕೇಳಿದಾಗ ಸಿದ್ಧರಾಮಯ್ಯ ಸಿಎಂ ಆಗಿದ್ದರು ಎಂಬುದಾಗಿ ನ್ಯಾಯಾಲಯದ ಗಮನಕ್ಕೆ ತಂದರು.

ದಿನಾಂಕ 25-10-2021ರಲ್ಲಿ 50:50 ನಿವೇಶನ ಹಂಚಿಕೆಗೆ ಮನವಿ ಮಾಡಲಾಗಿದೆ. ಸಿಎಂ ಪುತ್ರ ಇದ್ದಂತ ಮುಡಾ ಸಭೆಯಲ್ಲೇ ಒಪ್ಪಿಗೆ ನೀಡಲಾಗಿದೆ. ದಿನಾಂಕ 25-11-2021ರಂದು 50:50 ಹಕ್ಕು ಬಿಡುಗಡೆ ಮಾಡಲಾಗಿದೆ. ನಂತ್ರ ಸಿಎಂ ಪತ್ನಿಗೆ ಬದಲಿ ನಿವೇಶನ ಹಂಚಿಕೆ ಮಾಡಲಾಗಿದೆ. ಯಾವುದೇ ಜಮೀನು ಕಳೆದುಕೊಳ್ಳದೇ ಸಿಎಂ ಪತ್ನಿಗೆ ಸೈಟ್ ಹಂಚಿಕೆ ಮಾಡಲಾಗಿದೆ ಎಂಬುದಾಗಿ ಟಿಜೆ ಅಬ್ರಾಹಂ ಪರ ವಕೀಲ ರಂಗನಾಥ್ ತಮ್ಮ ವಾದವನ್ನು ಹೈಕೋರ್ಟ್ ಏಕಸದಸ್ಯ ನ್ಯಾಯಪೀಠದ ಮುಂದಿಟ್ಟರು.

ಅಂತಿಮವಾಗಿ ವಾದವನ್ನು ಆಲಿಸಿದ ಹೈಕೋರ್ಟ್ , ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ರಾಜ್ಯಪಾಲರ ಪ್ರಾಸಿಕ್ಯೂಷನ್ ಅನುಮತಿ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್.2ರ ಮಧ್ಯಾಹ್ನ 2.30ಕ್ಕೆ ಮುಂದೂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!