ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯಪಾಲರು ಒಂದು ಪಕ್ಷದ ಪರವಾಗಿ ಕೆಲ ಮಾಡುತ್ತಿರುವುದು ಖಂಡನೀಯ. ಆ ಹುದ್ದೆ ಎಂಬುದು ಸಂವಿಧಾನ ನೀಡಿರುವ ಪೀಠ. ರಾಜ್ಯಪಾಲರ ಕಚೇರಿ ಯಾವುದೇ ಒಂದು ರಾಜಕೀಯ ಪಕ್ಷದ ಕಚೇರಿಯಾಗಬಾರದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ಖಂಡಿಸಿ ಹಾಗೂ ಲೋಕಾಯುಕ್ತ, ಎಸ್ ಐಟಿ ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ ಮತ್ತು ಜನಾರ್ಧನ ರೆಡ್ಡಿ ಅವರ ವಿಚಾರಣೆಗೆ ಅನುಮತಿ ನೀಡಿ ಎಂದು ಆಗ್ರಹಿಸಿ ರಾಜಭವನ ಚಲೋ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ನಾಯಕರು, ರಾಜ್ಯಪಾಲರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ರಾಜ್ಯಪಾಲರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ರಾಜ್ಯಪಾಲರು ಸಂವಿಧಾನಿಕವಾಗಿ ಇರುವ ಹುದ್ದೆಯ ಘನತೆಗೆ ಧಕ್ಕೆ ಬರುವಂತೆ ನಡೆದುಕೊಳ್ಳಬಾರದು ಎಂಬುದು ನಮ್ಮ ಅಭಿಲಾಷೆ. ಹಾಗಾಗಿ ರಾಜಭವನ ಒಂದು ಪಕ್ಷದ ಕಚೇರಿಯಾಗಬಾರದು ಎಂದರು.
ರಾಜ್ಯಪಾಲರು ನಮಗೆ ಟೀ, ಕಾಫಿ ಮತ್ತು ಉಪಹಾರವನ್ನು ಕೊಟ್ಟು ಉಪಚರಿಸಿದರು. ಎಲ್ಲದಕ್ಕಿಂತ ಮುಖ್ಯವಾಗಿ ನಿಮಗೆ ನ್ಯಾಯ ನೀಡುತ್ತೇವೆ ಎಂದು ಭರವಸೆ ನೀಡಿದರು ಎಂದು ತಿಳಿಸಿದರು.
ಲೋಕಾಯುಕ್ತ ಎಸ್ ಐಟಿ ಅವರು ಮಾಜಿ ಮುಖ್ಯಮಂತ್ರಿ, ಹಾಲಿ ಕೇಂದ್ರಮಂತ್ರಿ ಕುಮಾರಸ್ವಾಮಿ ಹಾಗೂ ಮೂರು ಜನ ಮಾಜಿ ಮಂತ್ರಿಗಳ ಅಕ್ರಮಗಳ ವಿರುದ್ಧ ನ್ಯಾಯಾಲಯದ ಸೂಚನೆಯಂತೆ ಸಂಪೂರ್ಣ ತನಿಖೆ ನಡೆಸಿ ವರದಿ ನೀಡಿದ್ದಾರೆ. ಆದರೂ ಏನೂ ಕ್ರಮ ತೆಗೆದುಕೊಂಡಿಲ್ಲ. ನಮ್ಮ ಮುಖ್ಯಮಂತ್ರಿಗಳ ಮೇಲೆ ಕ್ರಮ ಕೈಗೊಳ್ಳಲು ಮುಂದಾಗುವ ರಾಜ್ಯಪಾಲರು, ಅವರ ಮೇಲೆ ಏಕೆ ಕ್ರಮ ತೆಗೆದುಕೊಂಡಿಲ್ಲ? ತಾರತಮ್ಯ ಎಸಗಿ ನಮ್ಮ ವಿರುದ್ಧ ಕೆಲಸ ಮಾಡಿದ್ದಾರೆ ಎಂದರ್ಥ ಅಲ್ಲವೇ? ಎಂದು ಪ್ರಶ್ನಿಸಿದರು.
ರಾಜ್ಯಪಾಲರು ಎಚ್ಚರದಿಂದ ಕೆಲಸ ಮಾಡಬೇಕಿತ್ತು. ಸಂವಿಧಾನದ ಪ್ರತಿನಿಧಿಯಾಗಿ ಕೆಲಸ ಮಾಡಬೇಕಿತ್ತೇ ಹೊರತು ಪಕ್ಷದ ಪ್ರತಿನಿಧಿಯಾಗಿ ಕೆಲಸ ಮಾಡಬಾರದಿತ್ತು. ಸಂವಿಧಾನಿಕ ಹುದ್ದೆಯನ್ನು ಸಂವಿಧಾನದ ರಕ್ಷಣೆಗೆ ಬಳಸಿಕೊಳ್ಳಬೇಕು ಎಂಬುದು ಸಾಮಾನ್ಯ ಜನರ ಅಭಿಪ್ರಾಯ ಎಂದು ಗುಡುಗಿದರು.