ರಸ್ತೆ, ರೈಲು ಹಳಿಗಳನ್ನು ಅತಿಕ್ರಮಿಸುವ ಧಾರ್ಮಿಕ ಕಟ್ಟಡಗಳನ್ನು ತೆರವು ಮಾಡಬೇಕು: ಸುಪ್ರೀಂ ಕೋರ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅನಧಿಕೃತ ಕಟ್ಟಡಗಳನ್ನು ಕೆಡವಲು ಯಾವುದೇ ನಿರ್ದಿಷ್ಟ ಸಮುದಾಯಕ್ಕೆ ಮೀಸಲಾಗಿರದೆ ಎಲ್ಲಾ ಧರ್ಮದ ನಾಗರಿಕರಿಗೆ ಅನ್ವಯವಾಗುವ ಮಾರ್ಗಸೂಚಿಗಳನ್ನು ರೂಪಿಸುವುದಾಗಿ ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.

ಈ ನಿರ್ಧಾರ ದೇಶಾದ್ಯಂತ ಎಲ್ಲಾ ಧರ್ಮಗಳಿಗೆ ಅನ್ವಯಿಸುತ್ತದೆ. ಒಬ್ಬ ವ್ಯಕ್ತಿ ಆರೋಪಿ ಅಥವಾ ಅಪರಾಧಿ ಎಂಬ ಕಾರಣಕ್ಕೆ ಅದು ಆಸ್ತಿಯ ಧ್ವಂಸಕ್ಕೆ ಆಧಾರವಾಗುವುದಿಲ್ಲ ಎಂದು ಹೇಳಿದೆ. ಹಾಗೆಂದು ಅತಿಕ್ರಮಣ ಮತ್ತು ಫುಟ್‍ಪಾತ್‍ಗಳನ್ನು ಅಸ್ತವ್ಯಸ್ತಗೊಳಿಸುವುದನ್ನು ಪ್ರೋತ್ಸಾಹಿಸುತ್ತಿಲ್ಲ. ಅನಧಿಕೃತ ನಿರ್ಮಾಣಕ್ಕೆ, ಒಂದು ಕಾನೂನು ಇರಬೇಕು, ಅದು ಧರ್ಮ ಅಥವಾ ನಂಬಿಕೆಗಳ ಮೇಲೆ ಅವಲಂಬಿತವಾಗಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ನಮ್ಮದು ಜಾತ್ಯತೀತ ದೇಶ, ನಾವು ಕೈಗೊಳ್ಳುವ ಕ್ರಮಗಳು ಎಲ್ಲಾ ಸಂಸ್ಥೆಗಳಿಗೂ ಎಲ್ಲಾ ಸಮುದಾಯಕ್ಕೂ ಅನ್ವಯವಾಗುತ್ತದೆ. ಅದು ನಿರ್ದಿಷ್ಟ ಸಮುದಾಯಕ್ಕೆ ಮಾತ್ರ ಅಲ್ಲ ಎಂದು ನ್ಯಾಯಮೂರ್ತಿಗಳಾದ ಬಿ.ಆರ್ ಗವಾಯಿ ಮತ್ತು ಕೆವಿ ವಿಶ್ವನಾಥನ್ ಅವರಿದ್ದ ದ್ವಿಸದಸ್ಯ ಪೀಠ ಹೇಳಿದೆ.

ಸಾರ್ವಜನಿಕ ಸುರಕ್ಷತೆಯು ಬಹಳ ಮುಖ್ಯವಾಗಿದೆ. ರಸ್ತೆ, ಜಲಮೂಲಗಳು ಅಥವಾ ರೈಲು ಹಳಿಗಳನ್ನು ಅತಿಕ್ರಮಿಸುವ ಯಾವುದೇ ಧಾರ್ಮಿಕ ಕಟ್ಟಡಗಳನ್ನು ತೆರವು ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ರಾಜ್ಯ ಸರ್ಕಾರಗಳು ಆರೋಪಿಗಳ ಆಸ್ತಿಗಳನ್ನು ನೆಲಸಮ ಮಾಡುತ್ತಿವೆ ಎಂದು ಆರೋಪಿಸಿ ಸಲ್ಲಿಸಲಾದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.ಸೆಪ್ಟೆಂಬರ್ 17 ರಂದು, ನ್ಯಾಯಾಲಯವು ಮಧ್ಯಂತರ ಆದೇಶದಲ್ಲಿ 15 ದಿನಗಳವರೆಗೆ ಬುಲ್ಡೋಜರ್ ಕಾರ್ಯಾಚರಣೆಗೆ ತಡೆ ನೀಡಿತ್ತು. ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ವ್ಯಕ್ತಿಗಳ ಆಸ್ತಿಗಳನ್ನು ನ್ಯಾಯಾಲಯದ ಅನುಮತಿ ಇಲ್ಲದೆ ನೆಲಸಮ ಮಾಡಬಾರದು ಎಂದು ನ್ಯಾಯಾಲಯವು ನಿರ್ದೇಶಿಸಿತ್ತು. ಈ ಆದೇಶವನ್ನು ವಿಸ್ತರಿಸಿದೆ.

ಸಾರ್ವಜನಿಕ ಬೀದಿಗಳು, ಫುಟ್‍ಪಾತ್‍ಗಳು, ರೈಲು ಮಾರ್ಗಗಳು ಅಥವಾ ಜಲಮೂಲಗಳಲ್ಲಿನ ಅನಧಿಕೃತ ನಿರ್ಮಾಣಗಳನ್ನು ತೆಗೆದುಹಾಕಲು ನಿರ್ದೇಶನ ಅನ್ವಯಿಸುವುದಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!