ಹೊಸದಿಗಂತ ವರದಿ ಮಂಡ್ಯ:
ರಾಜ್ಯ ಮತ್ತು ರಾಷ್ಟ್ರದಲ್ಲಿ ಬಡವರ ಹಸಿವಿನ ವಿಚಾರ ಗೌಣವಾಗಿದೆ. ಯಾರಿಗೂ ಬೇಡದ ಹಿಜಾಬ್ ವಿಚಾರದಲ್ಲಿ ದ್ವೇಷ ಹುಟ್ಟಿಸುವ ರಾಜಕಾರಣ ವಿಜೃಂಭಿಸುತ್ತಿದೆ. ಇದರ ವಿರುದ್ಧ ಜನ ಜಾಗೃತರಾಗದಿದ್ದರೆ ಅಪಾಯಕಾರಿ ಸನ್ನಿವೇಶ ನಿರ್ಮಾಣವಾಗಲಿದೆ ಎಂದು ರಾಜ್ಯಸಭಾ ಸದಸ್ಯ, ಚಿಂತಕ ಡಾ.ಎಲ್.ಹನುಮಂತಯ್ಯ ಎಚ್ಚರಿಸಿದರು.
ನಗರದ ಗಾಂಧಿ ಭವನದಲ್ಲಿ ಕರ್ನಾಟಕ ಸಮಾಜವಾದಿ ವೇದಿಕೆ ಮತ್ತು ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ವತಿಯಿಂದ, ಅಂಬೇಡ್ಕರ್ ಜನ್ಮದಿನ ಮತ್ತು ಪಂಚಾಯತ್‌ರಾಜ್ ದಿನದ ಅಂಗವಾಗಿ ಏರ್ಪಡಿಸಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ದ್ವೇಷ-ವೇಷ ನಮ್ಮ ರಾಜಕಾರಣದ ಪ್ರಮುಖ ಅಸ್ತ್ರವಾಗುತ್ತಿರುವ ಇಂದಿನ ದಿನಗಳಲ್ಲಿ ಸಂವಿಧಾನದ ಆಶಯಗಳನ್ನು ಅನುಷ್ಠಾನಕ್ಕೆ ತರಬೇಕಾದ ಅತ್ಯಂತ ಜರೂರು ಇದೆ.
ಈ ಹಿಂದೆ ದೇಶ ವಿಭಜನೆಯಾಗಿ ಏನೆಲ್ಲಾ ಸಮಸ್ಯೆಗಳನ್ನು ಅನುಭವಿಸಿ ಆಗಿದೆ. ಅನಾವಶ್ಯಕ ವಿವಾದಗಳಿಂದ ದೇಶವಾಸಿಗಳು ನೊಂದು ಬೆಂದಿದ್ದಾರೆ. ಹೀಗಿರುವಾಗ ಮತ್ತೊಂದು ವಿಭಜನೆಯತ್ತ ದೇಶವನ್ನು ಕೊಂಡೊಯ್ಯುತ್ತಿರುವ ರಾಜಕಾರಣದ ವಿರುದ್ಧ ಜಾಗೃತ ಮನಸ್ಸುಗಳು ಜನರಲ್ಲಿ ಅರಿವು ಮೂಡಿಸಬೇಕಿದೆ ಎಂದರು
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ