ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದಲ್ಲಿ ಸರ್ಕಾರಿ ಭೂಮಿಯಲ್ಲಿದ್ದ ಬಿ.ಆರ್. ಅಂಬೇಡ್ಕರ್ ಹಾಗೂ ಭಗವನ್ ಬುದ್ಧನ ಪ್ರತಿಮೆ ತೆರವು ವಿಚಾರದಲ್ಲಿ ಗ್ರಾಮಸ್ಥರು ಪೊಲೀಸರೊಂದಿಗೆ ಘರ್ಷಣೆ ನಡೆದಿದ್ದು, ಇದರಿಂದ ವಿಭಾರಾಪುರ ಗ್ರಾಮದಲ್ಲಿ ಉದ್ವಿಗ್ನತೆ ಉಂಟಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಗ್ರಾಮಸ್ಥರು ಕಲ್ಲು ತೂರಾಟ ನಡೆಸಿ ಘರ್ಷಣೆ ನಡೆಸಿದ್ದರಿಂದ ಕನಿಷ್ಠ ಎಂಟು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಅಧಿಕಾರಿಗಳ ಪ್ರಕಾರ, ಮಾರ್ಚ್ 11 ರಂದು ಪಂಚಾಯತ್ ಭವನದ ಮುಂಭಾಗದಲ್ಲಿ ಗ್ರಾಮಸ್ಥರು ಪ್ರತಿಮೆ ಪ್ರತಿಷ್ಠಾಪಿಸಿದ್ದರು. ದೂರಿನ ಮೇರೆಗೆ ತಹಸಿಲ್ ಆಡಳಿತ ಮಾರ್ಚ್ 12 ರಂದು ಪ್ರತಿಮೆಗೆ ತೆರವಿಗೆ ನೋಟಿಸ್ ನೀಡಿತ್ತು.ಆದರೆ, ಗ್ರಾಮಸ್ಥರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಪ್ರತಿಮೆಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿತ್ತು.
ಬಳಿಕ ಹೊಸ ಸೂಚನೆಗಳ ಮೇರೆಗೆ ತಂಡವೊಂದು ಬುಲ್ಡೋಜರ್‌ನೊಂದಿಗೆ ಪ್ರತಿಮೆಗಳನ್ನು ತೆರವುಗೊಳಿಸಿದೆ. ಪೊಲೀಸರು ಹಾಗೂ ಸ್ಥಳೀಯ ಆಡಳಿತದ ಅಧಿಕಾರಿಗಳು ಪ್ರತಿಮೆ ತೆರವಿಗೆ ಸಜ್ಜಾಗುತ್ತಿದ್ದಂತೇಅವರತ್ತ ಗ್ರಾಮಸ್ಥರ ಗುಂಪೊಂದು ಕಲ್ಲು ತೂರಾಟಕ್ಕೆ ಮುಂದಾಗಿದೆ.ಘಟನೆಯಲ್ಲಿ ಎಂಟು ಪೊಲೀಸರಿಗೆ ಗಾಯವಾಗಿದ್ದು, ಸರ್ಕಲ್ ಅಧಿಕಾರಿಯ ವಾಹನಕ್ಕೆ ಹಾನಿಯಾಗಿದೆ. ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದು, ಗಲಾಟೆ ವೇಳೆ ಕೆಲ ಗ್ರಾಮಸ್ಥರು ಕೂಡಾ ಗಾಯಗೊಂಡಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರವೀಣ್ ರಂಜನ್ ತಿಳಿಸಿದ್ದಾರೆ.