ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಆ್ಯಂಡ್‌ಗೆ ಗ್ಯಾಂಗ್‌ಗೆ ಮತ್ತೆ ಸಂಕಷ್ಟ ಎದುರಾಗಿದೆ. ದರ್ಶನ್ ಸೇರಿ ಆರು ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಉಳಿದಂತೆ ಎ1 ಆರೋಪಿ ಪವಿತ್ರಾ ಗೌಡ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಲಾಗಿದೆ.
ಗುರುವಾರ ಪೊಲೀಸ್ ಕಸ್ಟಡಿ ಅವಧಿ ಮುಗಿದ ಕಾರಣ ಎ1 ಆರೋಪಿ ಪವಿತ್ರಾ ಗೌಡ, ಎ2 ದರ್ಶನ್ ಸೇರಿ 17 ಆರೋಪಿಗಳನ್ನು ಗುರುವಾರ 24ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಈ ವೇಳೆ ಕೋರ್ಟ್ ದರ್ಶನ್ ಸೇರಿದಂತೆ ಆರು ಆರೋಪಿಗಳನ್ನು ಕೋರ್ಟ್ ಮೂರನೇ ಬಾರಿಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದರೆ, ಪವಿತ್ರಾ ಗೌಡ ಮತ್ತು 7 ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ .
ದರ್ಶನ್ ಸೇರಿ ಆರು ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಬೇಕು ಎಂದು, ಪವಿತ್ರಾ ಗೌಡ ಸೇರಿ 7 ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಬೇಕು ಎಂಬುದಾಗಿ ಪೊಲೀಸರು ಎರಡು ಪ್ರತ್ಯೇಕ ರಿಮ್ಯಾಂಡ್ ಅಪ್ಲಿಕೇಷನ್ ಸಲ್ಲಿಸಿದ್ದರು. ಅದರಂತೆ ಎಸ್‌ಪಿಪಿ ಪ್ರಸನ್ನಕುಮಾರ್ ಅವರು ವಾದ ಮಂಡಿಸಿದರು. ಕೊನೆಗೆ ನ್ಯಾಯಾಲಯವು ಎಸ್‌ಪಿಪಿ ಅವರ ವಾದವನ್ನು ಪುರಸ್ಕರಿಸಿ ದರ್ಶನ್, ವಿನಯ್, ಪ್ರದೋಶ್, ನಾಗರಾಜ್, ಲಕ್ಷ್ಮಣ್, ಧನರಾಜ್ ಅವರ ಪೊಲೀಸ್ ಕಸ್ಟಡಿಯನ್ನು ಮುಂದುವರಿಸಿದರು.
ಪವಿತ್ರಾ ಗೌಡ ಸಹಿತ A 3 ಪವನ್, A 4 ರಾಘವೇಂದ್ರ, A 5 ನಂದೀಶ, A 6 ಜಗದೀಶ್, A 7 ಅನುಕುಮಾರ್ A 8 ರವಿ ಶಂಕರ್ ಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಪೊಲೀಸ್ ಕಸ್ಟಡಿ ವೇಳೆ ಆರೋಪಿಗಳ ಸ್ವ ಇಚ್ಛಾ ಹೇಳಿಕೆ,ಕೃತ್ಯ ನಡೆಸಿದಾಗ ಧರಿಸಿದ್ದ ಬಟ್ಟೆಗಳು, ಮೊಬೈಲುಗಳು, ಸ್ಥಳ ಮಹಜರು ಸೇರಿ ಹಲವು ಮಹತ್ವದ ಸಾಕ್ಷ್ಯಗಳನ್ನು ಪೊಲೀಸರು ಕಲೆಹಾಕಿದ್ದಾರೆ.