ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಕೇಂದ್ರದ ಕ್ರಮವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದ ಬೆನ್ನಲ್ಲೇ ಪಾಕಿಸ್ತಾನ ಪ್ರತಿಕ್ರಿಯಿಸಿದೆ.
ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು 2019ರ ಆಗಸ್ಟ್ 5ರಂದು ರದ್ದುಗೊಳಿಸಿದ ದೆಹಲಿಯ ಏಕಪಕ್ಷೀಯ ಹಾಗೂ ಕಾನೂನು ಬಾಹಿರ ಕ್ರಮವನ್ನು ಅಂತಾರಾಷ್ಟ್ರೀಯ ಕಾನೂನು ಮಾನ್ಯ ಮಾಡುವುದಿಲ್ಲ ಎಂದು ಹೇಳಿದೆ.
2019ರ ಆಗಸ್ಟ್ 5ರಂದುದೆಹಲಿ ಕೈಗೊಂಡ ಕ್ರಮಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಾವುದೇ ಮಾನ್ಯತೆ ಇಲ್ಲ. ಸರ್ಕಾರದ ಆದೇಶಕ್ಕೆ ಪೂರಕವಾಗಿ ಭಾರತದ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿಗೂ ಯಾವುದೇ ಕಾನೂನು ಮೌಲ್ಯಗಳಿಲ್ಲ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯದಂತೆ ಕಾಶ್ಮೀರದ ಜನರನ್ನು ಸ್ವಯಂ ನಿರ್ಣಯದ ಅನಿರ್ಬಂಧಿತ ಹಕ್ಕುಗಳಿಂದ ಪ್ರತ್ಯೇಕಿಸಲಾಗದು ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಜಲೀಲ್ ಅಬ್ಬಾಸ್ ಜಿಲಾನಿ ಹೇಳಿದ್ದಾರೆ.
ಇದಕ್ಕೂ ಮೊದಲು ಪಾಕಿಸ್ತಾನದ ಮಾಜಿ ಪ್ರಧಾನಿ ಹಾಗೂ ಪಾಕಿಸ್ತಾನಿ ಮುಸ್ಲಿಂ ಲೀಗ್ ನವಾಜ್ ಪಕ್ಷದ ಅಧ್ಯಕ್ಷ ಶಹಬಾಜ್ ಶರೀಫ್ ಅವರು ಸುಪ್ರೀಂ ಕೋರ್ಟ್‌ನ ತೀರ್ಪನ್ನು ಖಂಡಿಸಿದ್ದಾರೆ. ‘ವಿಶ್ವ ಸಂಸ್ಥೆಯ ನಿರ್ಣಯದ ವಿರುದ್ಧ ತೀರ್ಪು ನೀಡಿರುವ ಭಾರತದ ಸುಪ್ರೀಂ ಕೋರ್ಟ್, ಅಂತಾರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿದೆ. ಲಕ್ಷಾಂತರ ಕಾಶ್ಮೀರಿಗಳ ತ್ಯಾಗಕ್ಕೆ ಸುಪ್ರೀಂ ಕೋರ್ಟ್ ದ್ರೋಹ ಬಗೆದಿದೆ. ಕಾಶ್ಮೀರಿಗಳ ಹೋರಾಟ ಇನ್ನೂ ಕ್ಷೀಣಿಸಿಲ್ಲ. ಭಾರತದ ಈ ನಿರ್ಣಯದಿಂದ ಸ್ವತಂತ್ರ ಕಾಶ್ಮೀರದ ಹೋರಾಟ ಇನ್ನಷ್ಟು ಬಲಿಷ್ಠಗೊಳ್ಳಲಿದೆ’ ಎಂದು ಎಚ್ಚರಿಸಿದ್ದಾರೆ.ಕಾಶ್ಮೀರಿಗಳ ಹಕ್ಕುಗಳಿಗಾಗಿ ಎಲ್ಲಾ ಹಂತಗಳಲ್ಲೂ ನಾವು ಧ್ವನಿ ಎತ್ತಲಿದ್ದೇವೆ’ ಎಂದು ಶಹಬಾಜ್ ಭರವಸೆ ನೀಡಿದ್ದಾರೆ.