ಹೊಸದಿಗಂತ, ಮಂಡ್ಯ:
ಕೃಷ್ಣರಾಜಸಾಗರ ಅಣೆಕಟ್ಟೆ ಸುತ್ತ ಮುತ್ತ ಟ್ರಯಲ್ ಬ್ಲಾಸ್ಟ್ ನಡೆಸದಂತೆ ಹಾಗೂ ನ್ಯಾಯಾಲಯದ ಆದೇಶದಂತೆ 20 ಕಿ.ಮೀ. ವ್ಯಾಪ್ತಿಯಲ್ಲಿ ಸಂಪೂರ್ಣ ಗಣಿ ಚಟುವಟಿಕೆ ನಿಷೇದಕ್ಕೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಬಿಜೆಪಿ ಕಾರ‌್ಯಕರ್ತರು, ಅಪರ ಜಿಲ್ಲಾಧಿಕಾರಿ ಡಾ. ಎಚ್.ಎಲ್. ನಾಗರಾಜು ಅವರಿಗೆ ಮನವಿ ಸಲ್ಲಿಸಿ, ಕೆ.ಆರ್.ಎಸ್. ಅಣೆಕಟ್ಟೆ ಕಾವೇರಿ ಕೊಳ್ಳದ ರೈತರ ಜೀವನಾಧಾರ, ಕನ್ನಂಬಾಡಿ ಸುತ್ತ ಮುತ್ತ ಎಗ್ಗಿಲ್ಲದೆ ನಡೆಯುತ್ತಿದ್ದ ಕಲ್ಲು ಗಣಿಗಾರಿಕೆಗೆ ಹೈಕೋರ್ಟ್ ಕಡಿವಾಣ ಹಾಕಿ 20 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇದ ಮಾಡಿ ಆದೇಶ ಹೊರಡಿಸಿದೆ.
ಆದರೆಗಣಿ ಮಾಲೀಕರ ಒತ್ತಡಕ್ಕೆ ಮಣಿದೋ ಇಲ್ಲ ಇನ್ನಾವುದೋ ಕಾರಣಕ್ಕಾಗಿ ಮತ್ತೆ ಟ್ರಯಲ್ ಬ್ಲಾಸ್ಟ್ ನಡೆಸಿ ಮತ್ತೊಮ್ಮೆ ಗಣಿಗಾರಿಕೆಗೆ ಕುಮ್ಮಕ್ಕು ನೀಡುತಿತರುವ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ನಡೆಯನ್ನು ಖಂಡಿಸಿದ್ದಾರೆ.
ಇಂತಹ ಟ್ರಯಲ್ ಬ್ಲಾಸ್ಟ್‌ಗೆ ಜಿಲ್ಲಾಡಳಿತ ಅನುಮತಿ ನೀಡಬಾರದು ಹಾಗೂ ಅಣೆಕಟ್ಟೆ ಸುರಕ್ಷತಾ ಕಾಯಿದೆ 2021 ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು. ಡಿಸ್ಟ್ರಿಕ್ ಮಿನರಲ್ ಫಂಡ್‌ನಿಂದ ಕಲ್ಲು ಗಣಿಯಲ್ಲಿ ದುಡಿಯುತ್ತಿರುವ ಕೂಲಿ ಕಾರ್ಮಿಕರ ಪುನರ್ವಸತಿ ಕಲ್ಪಿಸಬೇಕು. ಕೂಲಿ ಕಾರ್ಮಿಕರ ಜೀವನೋಪಾಯಕ್ಕಾಗಿ ಪರ್ಯಾಯ ವ್ಯವಸ್ಥೆಯನ್ನು ಜಿಲ್ಲಾಡಳಿತ ಹಾಗೂ ರಾಜ್ಯಸರ್ಕಾರ ಮಾಡಿಕೊಡಬೇಕು ಎಂದು ಆಗ್ರಹಿಸಿದರು.