Wednesday, February 28, 2024

ಸಿಲ್ಕ್ಯಾರಾ ಸುರಂಗದಿಂದ 41 ಕಾರ್ಮಿಕರ ರಕ್ಷಣೆ: ಸಿಹಿ ಹಂಚಿ ಸಂಭ್ರಮ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಉತ್ತರಾಖಂಡದ ಉತ್ತರಕಾಶಿಯ ನಿರ್ಮಾಣ ಹಂತದ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರ ರಕ್ಷಣೆ ಕಾರ್ಯ ಪೂರ್ಣಗೊಂಡಿದೆ.

17 ದಿನಗಳ ನಂತರ ಮಂಗಳವಾರ ಎಲ್ಲ ಕಾರ್ಮಿಕರನ್ನು ಹೊರತೆಗೆಯಲಾಗಿದೆ. ಇದರೊಂದಿಗೆ ಪವಾಡ ಸದೃಶ ರೀತಿಯಲ್ಲಿ ಕಾರ್ಮಿಕರು ಪಾರಾಗಿದ್ದು, ಸಿಎಂ ಪುಷ್ಕರ್ ಸಿಂಗ್ ಧಾಮಿ ಹಾಗೂ ಅಧಿಕಾರಿಗಳು ಕಾರ್ಮಿಕರನ್ನು ಬರಮಾಡಿಕೊಂಡರು.

ಆತಂಕ, ದುಗುಡದಿಂದ ಕೂಡಿದ್ದ ಘಟನಾ ಸ್ಥಳದಲ್ಲಿ ಸಂಭ್ರಮ ಮನೆ ಮಾಡಿದೆ.

ಚಾರ್​​ಧಾಮ್ ಯೋಜನೆಯಡಿ ನಿರ್ಮಿಸಲಾಗುತ್ತಿರುವ ಸಿಲ್ಕ್ಯಾರಾ ಸುರಂಗದಲ್ಲಿ ನವೆಂಬರ್ 12ರಂದು ಭೂಕುಸಿತ ಉಂಟಾಗಿತ್ತು. ಈ ಸಂದರ್ಭದಲ್ಲಿ ಸುರಂಗದಲ್ಲಿ ಕೆಲಸ ಮಾಡುತ್ತಿದ್ದ 41 ಕಾರ್ಮಿಕರು ಸಿಕ್ಕಿಬಿದ್ದಿದ್ದರು. ಅಂದಿನಿಂದ ರಕ್ಷಣಾ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿತ್ತು. ಭೂಮಿ ಕೊರೆಯುವ ಯಂತ್ರಗಳು ಹಲವು ಬಾರಿ ಕೆಟ್ಟು ನಿಂತಿತ್ತು. ಇದರಿಂದಾಗಿ ಮನುಷ್ಯ ಸಾಮರ್ಥ್ಯದಿಂದಲೇ ರ‍್ಯಾಟ್​ ರಂಧ್ರ ಕೊರೆಯುವ ಕಾರ್ಯ ನಡೆಸಲಾಗಿತ್ತು. ಸುಮಾರು 60 ಮೀಟರ್​​ ಕೊರೆಯಲಾಗಿದ್ದು, ಇಂದು ಅಂತಿಮವಾಗಿ ಸುರಂಗದೊಳಗೆ ಪೈಪ್ ಅಳವಡಿಸುವ ಕಾರ್ಯ ಪೂರ್ಣಗೊಂಡಿತ್ತು.

ರಾತ್ರಿ 8 ಗಂಟೆಗೆ ಕಾರ್ಮಿಕರನ್ನು ಹೊರ ಬರಲು ಅನುಮತಿಸುವ ಮೊದಲು ಪೈಪ್‌ಗಳನ್ನು ಪದೇ ಪದೇ ಪರಿಶೀಲಿಸಲಾಯಿತು. ನಂತರ ಎಲ್ಲ ಕಾರ್ಮಿಕರನ್ನು ಹೊರತೆಗೆಯುವ ಕಾರ್ಯ ಆರಂಭವಾಯಿತು. ಇದರಿಂದ ಕಾರ್ಮಿಕರ ಕುಟುಂಬಸ್ಥರ ಪ್ರಾರ್ಥನೆಗಳ ಫಲಿಸಿವೆ.

ಕಾರ್ಮಿಕರ ರಕ್ಷಣೆಗೆ ಕ್ಷಣಗಣನೆ ಶುರುವಾದ ಕೂಡಲೇ ಸ್ಥಳದಲ್ಲಿ ಆಯಂಬುಲೆನ್ಸ್​ಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿತ್ತು. ಸುರಂಗದಿಂದ ಹೊರಬಂದ ಕೂಡಲೇ ಎಲ್ಲರನ್ನೂ ಆಯಂಬುಲೆನ್ಸ್​ಗಳಿಗೆ ಸಾಗಿಸಲಾಗಿತು. ಕಾರ್ಮಿಕರನ್ನು ಈ ರಸ್ತೆಗಳ ಮೂಲಕ ನೇರವಾಗಿ ಆಸ್ಪತ್ರೆಗೆ ಕರೆದೊಯ್ಯಲು ಮಾರ್ಗದ ರಸ್ತೆಗಳನ್ನು ದುರಸ್ತಿ ಮಾಡಿ ಸಿದ್ಥಪಡಿಸಲಾಗಿದೆ.

ಕಾರ್ಮಿಕರ ಕುಟುಂಬಸ್ಥರು, ಸಂಬಂಧಿಕರು ಸ್ಥಳದಲ್ಲೇ ದಿನಗಳನ್ನು ಕಳೆದು ತಮ್ಮವರು ಹೊರಬರುವುದನ್ನೇ ಎದುರು ನೋಡುತ್ತಿದ್ದರು. ಒಬ್ಬೊಬ್ಬರೆ ಕಾರ್ಮಿಕರು ಹೊರ ಬರುತ್ತಿದ್ದಂತೆ ಸಿಎಂ ಧಾಮಿ, ಕೇಂದ್ರ ಸಚಿವ, ನಿವೃತ್ತ ಜನರಲ್ ವಿ.ಕೆ.ಸಿಂಗ್ ಹಾಗೂ ಅಧಿಕಾರಿಗಳನ್ನು ಬರಮಾಡಿಕೊಂಡು ಆರೋಗ್ಯ ವಿಚಾರಿಸಿದರು. ಬಹುಪಾಲು ಕಾರ್ಮಿಕರು ಆರೋಗ್ಯಯುತವಾಗಿ ಇರುವಂತೆ ಕಂಡು ಬಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!