ಹೊಸದಿಗಂತ ವರದಿ,ಮಡಿಕೇರಿ:
ನಿತ್ರಾಣಗೊಂಡಿದ್ದ ಹುಲಿಯೊಂದನ್ನು ರಕ್ಷಿಸುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದ್ದು, ಸೆರೆಯಾದ ಹುಲಿಯನ್ನು ಮೈಸೂರು ಬಳಿಯ ಕೂರ್ಗಳ್ಳಿಗೆ ಸ್ಥಳಾಂತರಿಸಲಾಗಿದೆ.
ಕುಶಾಲನಗರ ವಲಯದ ಮಾಲ್ದಾರೆ ವ್ಯಾಪ್ತಿಯಲ್ಲಿ ಅಂದಾಜು 12 ವರ್ಷದ ಹುಲಿಯೊಂದು ಕಳೆದ ಕೆಲವು ದಿನಗಳ ಹಿಂದೆ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿತ್ತು. ಈ ಹುಲಿಯ ಮೇಲೆ ನಿಗಾ ಇರಿಸಿದ್ದ ಅರಣ್ಯ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡು ಸೆರಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಮಾಲ್ದಾರೆ ಗ್ರಾಮದ ಆಸ್ತಾನ ಕೆರೆಯ ಬಳಿ ಸಾಕಾನೆಗಳಾದ ಪ್ರಶಾಂತ್, ಸುಗ್ರೀವ, ಶ್ರೀರಾಮ, ವಿಕ್ರಮ, ಹರ್ಷ ಹಾಗೂ ಈಶ್ವರ ಎಂಬವುಗಳ ಸಹಯೋಗದೊಂದಿಗೆ ಅರಣ್ಯ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು.
ವೈದ್ಯಾಧಿಕಾರಿ ಡಾ.ರಮೇಶ್ ಹಾಗೂ ಕುಶಾಲನಗರ ಉಪವಲಯ ಅರಣ್ಯಾಧಿಕಾರಿ ಕನ್ನಂಡ ರಂಜನ್ ಅರವಳಿಕೆ ಪ್ರಯೋಗಿಸಿದರು. ಆಹಾರ ಸೇವಿಸದೆ ನಿತ್ರಾಣಗೊಂಡಿದ್ದ ಹುಲಿಗೆ ವೈದ್ಯಾಧಿಕಾರಿ ಡಾ.ಚಿಟ್ಟಿಯಪ್ಪ ಹಾಗೂ ಡಾ.ರಮೇಶ್ ಚಿಕಿತ್ಸೆ ನೀಡಿದರು. ನಂತರ ಹುಲಿಯನ್ನು ಕೂರ್ಗಳ್ಳಿಗೆ ಸ್ಥಳಾಂತರಿಸಲಾಯಿತು.
ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್.ಮೂರ್ತಿ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡಿಎಫ್‍ಓ ಎಂ.ಟಿ.ದೇವಯ್ಯ, ಎಸಿಎಫ್ ಎ.ಎ.ಗೋಪಾಲ, ಕುಶಾಲನಗರ ವಲಯ ಅರಣ್ಯಾಧಿಕಾರಿ ಕೆ.ವಿ.ಶಿವರಾಂ, ತಿತಿಮತಿ ಆರ್’ಎಫ್‍ಓ ಅಶೋಕ್, ವಿರಾಜಪೇಟೆ ಆರ್’ಎಫ್‍ಓ ದೇವಯ್ಯ ಪಾಲ್ಗೊಂಡಿದ್ದರು.
ಸೆರೆ ಹಿಡಿಯಲಾದ ಹುಲಿಗೆ ಕೂರ್ಗಳ್ಳಿಯಲ್ಲಿ ಆರೈಕೆ ಮಾಡಿದ ನಂತರ ಮೈಸೂರಿನ ಮೃಗಾಲಯಕ್ಕೆ ಬಿಡಲಾಗುವುದೆಂದು ಕುಶಾಲನಗರ ವಲಯ ಅರಣ್ಯ ಅಧಿಕಾರಿ ಶಿವರಾಂ ತಿಳಿಸಿದ್ದಾರೆ.