ಹೊಸದಿಗಂತ ಬೆಳಗಾವಿ:
ಸರ್ಕಾರಿ ಗುತ್ತಿಗೆಯಲ್ಲಿ ಮುಸ್ಲಿಂರಿಗೆ ಮೀಸಲಾತಿ ನೀಡುವ ಮೂಲಕ ಜಾತಿ ಜಾತಿ ನಡುವೆ ಜಗಳ ಹಚ್ಚುವ, ಒಡಕು ಮೂಡಿಸುವ ದುಸ್ಸಾಹಸ ಮತ್ತು ಷಡ್ಯಂತ್ರಕ್ಕೆ ಸಿಎಂ ಸಿದ್ದರಾಮಯ್ಯ ಕೈ ಹಾಕಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹರಿಹಾಯ್ದರು.
ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಮುಸ್ಲಿಂರ ಓಲೈಕೆ ದುರ್ದೈವದ ಸಂಗತಿ. ಇದನ್ನು ಬಿಜೆಪಿ ಬಲವಾಗಿ ಖಂಡಿಸುತ್ತದೆ. ಅಲ್ಲದೇ, ಸದನದ ಹೊರಗೆ ಮತ್ತು ಒಳಗೆ ಹೋರಾಟ ಮಾಡಲಿದ್ದೇವೆ ಎಂದು ಎಚ್ಚರಿಸಿದರು. ಸಂವಿಧಾನದಲ್ಲಿ ಧರ್ಮದ ಆಧಾರದಲ್ಲಿ ಮೀಸಲಾತಿ ಕೊಡುವ ಬಗ್ಗೆ ಉಲ್ಲೇಖವಾಗಿಲ್ಲ. ಹೀಗಾಗಿ, ಈ ಅಸಂವಿಧಾನಾತ್ಮಕ ತೀರ್ಮಾನವನ್ನು ನಾವು ಖಂಡಿಸುತ್ತೇವೆ, ಪ್ರಜಾಪ್ರಭುತ್ವ ವಿರೋಧಿ ನಿಲುವನ್ನು ವಿರೋಧಿಸುತ್ತೇವೆ ಎಂದರು.
ಸದನದೊಳಗೆ ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ರಾಜ್ಯ ಸರ್ಕಾರದ ಕಿವಿ ಹಿಂಡುವ ಕೆಲಸ ಮಾಡುತ್ತಿದ್ದೇವೆ. ಹಣಕಾಸಿನ ಮುಗ್ಗಟ್ಟಿದೆ ಅಂತಾ ಬಿಜೆಪಿ ಘೋಷಿಸಿದ್ದ ವಿಶ್ವವಿದ್ಯಾಲಯಗಳನ್ನು ಮುಚ್ಚುವ ನಿರ್ಧಾರಕ್ಕೆ ಈ ಸರ್ಕಾರ ಬಂದಿತ್ತು. ಯಾವಾಗ ಸದನದಲ್ಲಿ ಈ ವಿಷಯ ನಾವು ಚರ್ಚಿಸಿದೇವೋ, ಮುಂದೆ ನಾವು ಹೋರಾಟಕ್ಕೆ ಇಳಿಯುತ್ತೇವೆ ಎಂಬುದನ್ನು ಮನಗಂಡು ಸಿಎಂ ಸಿದ್ದರಾಮಯ್ಯ ಅವರು ವಿವಿ ಮುಚ್ಚುವ ನಿರ್ಧಾರ ಕೈಗೊಂಡಿಲ್ಲ ಎಂದು ಮೊನ್ನೆ ಸದನದಲ್ಲಿ ಹೇಳಿಕೆ ನೀಡಿದ್ದಾರೆ. ಆ ನಿರ್ಧಾರದಿಂದ ಒಂದು ಹೆಜ್ಜೆ ಹಿಂದೆ ಸರಿದಿದ್ದಾರೆ. ಇದು ನಮ್ಮ ಹೋರಾಟದ ಪರಿಣಾಮ ಎಂದು ವಿಜಯೇಂದ್ರ ಸಮರ್ಥಿಸಿಕೊಂಡರು.
ಫೈನಾನ್ಸ್ ಹಾವಳಿ ಕುರಿತು ಸದನದಲ್ಲಿ ಚರ್ಚೆ ಆಗಿದೆ. ಈ ಕುರಿತು ಒಂದು ಬಿಲ್ ಕೂಡ ಪಾಸ್ ಆಗಿದೆ. ಬಿಗಿಯಾದ ಕಾನೂನು ಅನುಷ್ಠಾನಕ್ಕೆ ತರುತ್ತೇವೆ. ಫೈನಾನ್ಸ್ ಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವೆ ಎಂದು ಸರ್ಕಾರ ಹೇಳಿದೆ. ಈಗಾಗಲೇ ಸಾಕಷ್ಟು ಸಾವು ನೋವು ಆಗಿದೆ. ಹಾಗಾಗಿ, ಸರ್ಕಾರ ಎಚ್ಚೆತ್ತುಕೊಂಡು ಬಡವರಿಗೆ ಅನ್ಯಾಯ ಆಗುತ್ತಿರುವುದನ್ನು ಸರಿಪಡಿಸಲಿ ಎಂದು ವಿಜಯೇಂದ್ರ ಒತ್ತಾಯಿಸಿದರು.