Saturday, December 9, 2023

Latest Posts

ಮಹಿಳೆಯರಿಗೆ ಮೀಸಲಾತಿ: ಬಳ್ಳಾರಿಯಲ್ಲಿ ಬಿಜೆಪಿ ಮಹಿಳಾ ಕಾರ್ಯಕರ್ತರಿಂದ ಸಂಭ್ರಮಾಚರಣೆ

ಹೊಸದಿಗಂತ ವರದಿ ಬಳ್ಳಾರಿ:

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಮಹಿಳೆಯರಿಗೆ ರಾಜಕೀಯವಾಗಿ ಶೇ.33ರಷ್ಟು ಮೀಸಲಾತಿ ಕಲ್ಪಿಸಿದ ಹಿನ್ನೆಲೆಯಲ್ಲಿ ನಗರದ ಬಿಜೆಪಿ ಜಿಲ್ಲಾ ಕಚೇರಿ ಎದುರು ಇಲ್ಲಿನ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರು ಬುಧವಾರ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸುಗುಣ ಅವರು ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಮಹಿಳೆಯರಿಗೆ ರಾಜಕೀಯವಾಗಿ ಶೇ.33ರಷ್ಟು ಮೀಸಲಾತಿ ಕಲ್ಪಿಸಿ ಇತಿಹಾಸ ಸೃಷ್ಟಿಸಿದ್ದು, ಅತ್ಯಂತ ಸಂತಸ ಮೂಡಿಸಿದೆ. ಇಲ್ಲಿವರೆಗೆ ವಿವಿಧ ಪಕ್ಷಗಳ ನಾಯಕರು ಮಾಡದ ಸಾಧನೆಯನ್ನು ನಮ್ಮ ಮೋದಿ ಅವರು ಮಹಿಳೆಯರಿಗೆ ರಾಜಕೀಯವಾಗಿ ಮೀಸಲಾತಿ ಕಲ್ಪಿಸಿದ್ದಾರೆ. ನೂತನ ಸಂಸತ್ ಭವನ ಉದ್ಘಾಟನೆ ದಿನದಂದೇ ನಡೆದ ಮೊದಲ ಲೋಕಸಭೆ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಿದ್ದು, ಸಂತಸ ಮೂಡಿಸಿದೆ ಎಂದರು.

ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್ ಗುರುಲಿಂಗನಗೌಡ ಅವರು ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಮಹಿಳೆಯರಿಗೆ ಶೇ.33ರಷ್ಟು ರಾಜಕೀಯವಾಗಿ ಮೀಸಲಾತಿ ಕಲ್ಪಿಸುವ ಮೂಲಕ ಇತಿಹಾಸ ಸೃಷ್ಟಿಸಿದೆ. ಇದರಿಂದ ಸಂಸತ್ ನ 545 ಜನರಲ್ಲಿ 181 ಜನ ಮಹಿಳೆಯರು ಸಂಸದರಾಗಲಿದ್ದಾರೆ. ರಾಜ್ಯದ 224 ಜನ ಸದಸ್ಯರಲ್ಲಿ 74 ಜನ ಮಹಿಳೆಯರೇ ಶಾಸಕರಾಗಿ ಅಯ್ಕೆಯಾಗಲಿದ್ದಾರೆ. ರಾಜ್ಯದ 28 ಜನ ಸಂಸದರಲ್ಲಿ 9 ಜನ ಮಹಿಳೆಯರು ಸಂಸದರಾಗಲಿದ್ದಾರೆ, ಕೇಂದ್ರದ ಈ ನಿರ್ಧಾರ ಅತ್ಯಂತ ಸಂತಸ ಮೂಡಿಸಿದೆ.

ರಾಜ್ಯದಲ್ಲಿ ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಅವರು ಇಂಧನ ಸಚಿವರಾಗಿ ಮಾದರಿ ಕೆಲಸಗಳನ್ನು ಮಾಡಿ ಇತರರಿಗೆ ಮಾದರಿಯಾಗಿದ್ದರು.ಜೊತೆಗೆ ಗ್ರಾಮೀಣಾಭಿವೃದ್ಧಿ ಸಚಿವೆಯಾಗಿ ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ಮಹಿಳೆಯರ ಶಕ್ತಿ ಏನೆಂಬುದನ್ನು ಸಾಬೀತು ಪಡಿಸಿದ್ದಾರೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ, ಮಾಜಿ ಸಚಿವೆ ಸುಷ್ಮಾ ಸ್ವರಾಜ್, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಾದರಿ ಆಡಳಿತ ನೀಡುವ ಮೂಲಕ ತಮ್ಮ ಶಕ್ತಿಯನ್ನು ಪ್ರದರ್ಶಿಸಿ ಇತರರಿಗೆ ಮಾದರಿಯಾಗಿದ್ದಾರೆ. ಕೇಂದ್ರ ಸರ್ಕಾರದ ಈ ನಿರ್ಧಾರ ಅತ್ಯಂತ ಸಂತಸ ಮೂಡಿಸಿದ್ದು, ಕೇಂದ್ರ ಸರ್ಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸುವೆ ಎಂದರು.

ಈ ಸಂದರ್ಭದಲ್ಲಿ ಎಮ್ಮೆಲ್ಸಿ ವೈ.ಎಂ.ಸತೀಶ್, ಬಿಜೆಪಿ ಜಿಲ್ಲಾಧ್ಯಕ್ಷ ಮುರಹರಗೌಡ ಗೋನಾಳ್, ಪಾಲಿಕೆ ಮಾಜಿ ಸದಸ್ಯ ಎಸ್. ಮಲ್ಲನಗೌಡ, ರಾಮಾಂಜಿನಿ, ರಾಮಕೃಷ್ಣ, ಶಂಕ್ರಪ್ಪ, ಬಾಲಚಂದ್ರ, ಪಾಲಿಕೆ ಸದಸ್ಯರಾದ ಸುರೇಖಾ ಮಲ್ಲನಗೌಡ, ಚೇತನಾ ವೇಮಣ್ಣ, ಮಹಿಳಾ ಘಟಕದ ಉಪಾಧ್ಯಕ್ಷೆ ಡಾ.ಅರುಣಾ ಕಾಮಿನೇನಿ, ಸಾಧನಾ ಹಿರೇಮಠ್, ಶಶಿಕಲಾ, ಸುಮಾ ರೆಡ್ಡಿ, ಅಲಿವೇಲಮ್ಮ, ನ್ಯಾಯವಾದಿ ವಿಜಯಲಕ್ಷ್ಮಿ, ಶೈಲಜಾ, ನೀಲಮ್ಮ, ಪುಷ್ಪಾ, ಮೇಘನಾ, ಅನ್ನಪೂರ್ಣ, ಮಮತಾ ಶಬ್ನಂ ಸೇರಿದಂತೆ ಇತರರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!