ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ: ಸಿಎಂ ಭೇಟಿಯಾದ ಕರವೇ ನಿಯೋಗ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿಗೆ ಆಗ್ರಹಿಸಿ ರಾಜ್ಯಾದ್ಯಂತ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ನಡೆಸಲಾಗಿದ್ದು, ಈ ನಡುವೆ ಸಿಎಂ ಸಿದ್ದರಾಮಯ್ಯ ಅವರನ್ನು ಕರವೇ ಅಧ್ಯಕ್ಷ ಟಿ.ಎ.ನಾರಾಯಣ ಗೌಡ ನೇತೃತ್ವದ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಿದೆ.

ಸಿಎಂ ಕಾವೇರಿ ನಿವಾಸದಲ್ಲಿ ಸಿದ್ದರಾಮಯ್ಯ ಅವರನ್ನು ನಿಯೋಗ ಭೇಟಿ ಮಾಡಿ, ಕನ್ನಡಿಗರಿಗೆ ಉದ್ಯೋಗ ನೀಡಲು ಡಾ. ಸರೋಜಿನಿ ಮಹಿಷಿ ವರದಿ ಜಾರಿ ಮಾಡಲು ಕೋರಿದೆ. ಇದಕ್ಕೆ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿ, ನಾಳೆಯೇ ಅಧಿಕಾರಿಗಳನ್ನು ಕರೆಸಿ ಚರ್ಚೆ ಮಾಡುವುದಾಗಿ ಭರವಸೆ ನೀಡಿದ್ದಾರೆ.

ಸಿಎಂ ಭೇಟಿ ಬಳಿಕ ಮಾತನಾಡಿದ ಕರವೇ ಅಧ್ಯಕ್ಷ ಟಿ.ಎ.ನಾರಾಯಣ ಗೌಡ ಅವರು, ನಾನು ಮೊದಲೇ ಒಂದು ಮಾತು ಹೇಳಿದ್ದೆ. ಸಿಎಂ ಸಿದ್ದರಾಮಯ್ಯ ಅವರಿಗೆ ಕನ್ನಡದ ಬಗ್ಗೆ ಕಾಳಜಿ ಇದೆ. ಈಗ ನಾವು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಕೊಟ್ಟಿದ್ದು, ನಾಳೆಯೇ ಅಧಿಕಾರಿಗಳನ್ನು ಕರೆಸಿ ಚರ್ಚೆ ಮಾಡುತ್ತೀನಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ನಮ್ಮ ಸರ್ಕಾರ ಸದಾ ಕನ್ನಡದ ಪರವಾಗಿದೆ, ನಾನು ಕೂಡ ಕನ್ನಡ ಪರ ಇದ್ದೀನಿ. ನಿಮ್ಮ ಮನವಿಯನ್ನು ಪರಿಶೀಲಿಸಿ ಶೀಘ್ರದಲ್ಲಿಯೇ ಕಾನೂನು ತಜ್ಞರ ಜತೆ ಚರ್ಚೆ ಮಾಡುತ್ತೀನಿ ಎಂದು ಸಿಎಂ ಹೇಳಿರುವುದಾಗಿ ತಿಳಿಸಿದರು.

ಕನ್ನಡದ ವಿಚಾರದಲ್ಲಿ ನಾನು ರಾಜಿ ಆಗಲ್ಲ . ಡಾ. ಸರೋಜಿನಿ ಮಹಿಷಿ ವರದಿ ಜಾರಿಗಾಗಿ 40 ವರ್ಷದಿಂದ ಹೋರಾಟ ಮಾಡುತ್ತಿದ್ದೀವಿ. ಈ ವರದಿ ಪ್ರಕಾರ ಉದ್ಯೋಗದಲ್ಲಿ 100ಕ್ಕೆ 100ರಷ್ಟು ಕನ್ನಡಿಗರು ಇರಬೇಕು ಅಂತ ಇದೆ. ಕರ್ನಾಟಕದಲ್ಲಿರುವ ಕನ್ನಡಿಗರಿಗೆ ಉದ್ಯೋಗ ಸಿಗಬೇಕು. ಎಲ್ಲ ವಿಚಾರಗಳನ್ನು ಸಿಎಂಗೆ ಮನವರಿಕೆ ಮಾಡಿದ್ದೇವೆ. ಜಾರಿಗೆ ತಂದರೆ ಬದುಕು ಕಟ್ಟಿಕೊಳ್ಳುವ ಕೆಲಸ ಮಾಡಲಾಗುತ್ತೆ. ಸಿದ್ದರಾಮಯ್ಯ ಮೇಲೆ ಭರವಸೆ ಇದೆ ಎಂದು ಹೇಳಿದರು.

ಕನ್ನಡ ನಾಮಫಲಕ ಕಡ್ಡಾಯ ಮಾಡುವ ವಿಚಾರಕ್ಕೆ ಸರ್ಕಾರ ಸರಿಯಾಗಿ ಕಾಯ್ದೆ ಮಾಡಿದೆ. ಇದರಿಂದ ಶೇ. 60% ಕನ್ನಡ ಕರ್ನಾಟಕದಲ್ಲಿ ಕಾಣುತ್ತಿದೆ. ನಾನು ಮುಂದಿನ ವಾರ ದೆಹಲಿಗೆ ಹೋಗಬೇಕು, ಕುಮಾರಸ್ವಾಮಿ, ಪ್ರಲ್ಹಾದ್ ಜೋಶಿ, ಸೋಮಣ್ಣರನ್ನು ಭೇಟಿ ಮಾಡುತ್ತೀನಿ. ರಾಜ್ಯಕ್ಕೆ ಸಂಬಂಧಪಟ್ಟ ವಿಚಾರಗಳ ಬಗ್ಗೆ ಅವರೊಂದೊಗೆ ಚರ್ಚೆ ಮಾಡುತ್ತೇನೆ. ತೆರಿಗೆ, ಜಿಎಸ್‌ಟಿ ಸೇರಿ 1 ಲಕ್ಷ 86 ಕೋಟಿ ರೂ. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಿದೆ. ಈ ವಿಚಾರವಾಗಿ ನಮ್ಮ ಜೊತೆ ಕೈ ಜೋಡಿಸಿ ಅಂತ ಸಿಎಂ ಕೇಳಿದ್ದಾರೆ ಎಂದು ನಾರಾಯಣ ಗೌಡ ತಿಳಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!