ಹೊಸದಿಗಂತ ವರದಿ, ಮೈಸೂರು:
ಕೇರಳದ ವಯನಾಡು ಹಾಗೂ ಹಿನ್ನೀರಿನ ಪ್ರದೇಶದಲ್ಲಿ ನಿರಂತರವಾಗಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯ ಇದೀಗ ಸಂಪೂರ್ಣವಾಗಿ ಭರ್ತಿಯಾಗಿದೆ.
೨೨೮೪ ಅಡಿಯಿರುವ ಈ ಜಲಾಶಯದಲ್ಲಿ ೨೨೮೨.೯೧ ಅಡಿ ನೀರಿದ್ದು, ೧೯.೫೨ ಟಿಎಂಸಿ ನೀರು ಸಂಗ್ರಹ ಸಾಮಾರ್ಥ್ಯವಿದೆ. ಈಗ ೧೮.೮೧ ಅಡಿ ನೀರಿದೆ. ಸಂಪೂರ್ಣವಾಗಿ ಭರ್ತಿಯಾಗುವುದಕ್ಕೆ ಅವಕಾಶವಿದ್ದರೂ, ಜಲಾಶಯದ ಸುರಕ್ಷತೆಯ ದೃಷ್ಠಿಯಿಂದ ಸಂಪೂರ್ಣ ಭರ್ತಿಯಾಗುವುದಕ್ಕೆ ಒಂದು ಅಡಿ ನೀರಿನ ಅಂತರ ಕಾಯ್ದುಕೊಳ್ಳಲಾಗುತ್ತಿದೆ. ಜಲಾಶಯಕ್ಕೆ ೬೪೨೪ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ೫ ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.
ಜಲಾನಯನ ಪ್ರದೇಶಗಳಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವ ಹಿನ್ನಲೆ ಕಬಿನಿ ಜಲಾಶಯದಿಂದ ಯಾವುದೇ ಕ್ಷಣದಲ್ಲಾದರೂ ಇನ್ನೂ ಹೆಚ್ಚಿನ ಪ್ರಮಾಣದ ನೀರನ್ನು ನದಿಗೆ ಹರಿಸುವ ಸಾಧ್ಯತೆ ಇದ್ದು, ಕಬಿನಿ ನದಿಯ ಪಾತ್ರದಲ್ಲಿರುವ ಮತ್ತು ನದಿಯ ಎರಡೂ ದಂಡೆಯಲ್ಲಿ ವಾಸಿಸುತ್ತಿರುವ ಜನರು ತಮ್ಮ ಆಸ್ತಿ ಪಾಸ್ತಿ ಹಾಗೂ ಜಾನುವಾರು ರಕ್ಷಣೆಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಿ ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚಿಸಲಾಗಿದೆ ಎಂದು ಹೆಚ್.ಡಿ.ಕೋಟೆ ತಾಲ್ಲೂಕಿನ ಕಬಿನಿ ಜಲಾಶಯ ವಿಭಾಗದ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.