ಗಣಿಗಾರಿಕೆ ಬಾಧಿತ ಪ್ರದೇಶಗಳ ಮರುಸ್ಥಾಪನೆ – ಇದೊಂದು ಜಾಗತಿಕ ಅನಿವಾರ್ಯತೆ ಜೊತೆಗೆ ಭಾರತದ ಜಿ 20 ಆದ್ಯತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಶ್ರೀ ಸಿ.ಪಿ. ಗೋಯಲ್
(ಮಹಾ ನಿರ್ದೇಶಕರು-ಅರಣ್ಯ ಮತ್ತು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ವಿಶೇಷ ಕಾರ್ಯದರ್ಶಿಗಳು)

ಖನಿಜ ಸಂಪನ್ಮೂಲ ಕ್ಷೇತ್ರವು ಜಾಗತಿಕ ಆರ್ಥಿಕತೆ ಮತ್ತು ಮಾನವ ಅಭಿವೃದ್ಧಿಗೆ ನಿರ್ಣಾಯಕವಾದುದು. ವಿಶ್ವಸಂಸ್ಥೆಯ ಎಲ್ಲಾ 17 ʻಸುಸ್ಥಿರ ಅಭಿವೃದ್ಧಿ ಗುರಿಗಳುʼ (ಎಸ್ಡಿಜಿ) ಮತ್ತು ʻಪ್ಯಾರಿಸ್ ಒಪ್ಪಂದʼಕ್ಕೆ ಇದರ ಕೊಡುಗೆ ಅಪಾರ. ಇದು ಹಲವಾರು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ನಿಗದಿತ ಸಮಯಕ್ಕಿಂತ ಮುಂಚಿತವಾಗಿಯೇ ಸಾಧಿಸಲು ಅನುವು ಮಾಡಿಕೊಡಬಹುದು ಅಥವಾ ಅವುಗಳ ಸಾಧನೆಗೆ ಅಡ್ಡಿಯೂ ಆಗಬಹುದು. 2050ರ ವೇಳೆಗೆ ವಿಶ್ವದ ಜನಸಂಖ್ಯೆ ಈಗಿನ 7.8 ಶತಕೋಟಿಯಿಂದ 9.6 ಶತಕೋಟಿಗೆ ಏರುವ ನಿರೀಕ್ಷೆಯಿದ್ದು, ಹೆಚ್ಚುತ್ತಿರುವ ತಲಾ ಬಳಕೆಯನ್ನು ಪೂರೈಸುವ ಸವಾಲನ್ನು ಈ ಕ್ಷೇತ್ರವು ಎದುರಿಸುತ್ತಿದೆ. 2000 ಮತ್ತು 2019ರ ನಡುವಿನ ಅವಧಿಯಲ್ಲಿ ಸಂರಕ್ಷಿತ ಪ್ರದೇಶಗಳಲ್ಲಿ ಗಣಿಗಾರಿಕೆ ಪ್ರಮಾಣ 100% ಹೆಚ್ಚಳವಾಗಿರುವುದು ಅಧ್ಯಯನಗಳಿಂದ ತಿಳಿದುಬಂದಿದೆ.

ಇಂಧನ ಬಳಕೆಯಲ್ಲಿ ಆಗುತ್ತಿರುವ ಪರಿವರ್ತನೆ ಹಾಗೂ ವಿಕಿರಣಗಳನ್ನು ಹೊರಸೂಸುವ ಅಪರೂಪದ ಮಣ್ಣಿನ ಲೋಹಗಳನ್ನು ಗಣಿಗಾರಿಕೆ ಮಾಡುವ ಅನಿವಾರ್ಯತೆಯ ಹಿನ್ನೆಲೆಯಲ್ಲಿ ಈ ಪರಿಸ್ಥಿತಿ ಮತ್ತಷ್ಟು ಹದಗೆಡುವ ನಿರೀಕ್ಷೆಯಿದೆ. ಸುಸ್ಥಿರ ಗಣಿಗಾರಿಕೆ ಮತ್ತು ಗಣಿ ಮುಚ್ಚುವಿಕೆಯು ಪ್ರಸ್ತುತ ಅತ್ಯಂತ ಜಾಗತಿಕ ಪ್ರಾಮುಖ್ಯತೆಯನ್ನು ಹೊಂದಿರುವ ವಿಷಯವಾಗಿದೆ.

ಇಂಧನದ ಬೇಡಿಕೆ ಮತ್ತು ಪೂರೈಕೆಯನ್ನು ಸಮತೋಲನಗೊಳಿಸುವ ನಿಟ್ಟಿನಲ್ಲಿ ಗಣಿಗಾರಿಕೆ ಚಟುವಟಿಕೆಗಳನ್ನು ಹೆಚ್ಚಿಸಿ, ಆ ಮೂಲಕ ನೈಸರ್ಗಿಕ ಸಂಪನ್ಮೂಲಗಳನ್ನು ಹೊರತೆಗೆಯಲಾಗುತ್ತಿದೆ. ಆದರೆ ಇದು ಅರಣ್ಯನಾಶ, ಮಣ್ಣಿನ ಮೇಲ್ಪದರದ ಸ್ಥಳಾಂತರ ಮತ್ತು ತ್ಯಾಜ್ಯದ ರಾಶಿ ಹೆಚ್ಚಳಕ್ಕೆ ಕಾರಣವಾಗಿದೆ. ಇವೆಲ್ಲವೂ ಪರಿಸರ ವ್ಯವಸ್ಥೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ಗಣಿಗಾರಿಕೆಯಿಂದ ಹಾನಿಗೊಳಗಾದ ಭೂಮಿಯನ್ನು ಸಹಜ ಸ್ಥಿತಿಗೆ ಮರುಸ್ಥಾಪಿಸುವ ನಿಟ್ಟಿನಲ್ಲಿ ಇತ್ತೀಚೆಗೆ ಕಂಡು ಬಂದಿರುವ ಪ್ರಗತಿಯು, ದೀರ್ಘಕಾಲೀನ ನಿರ್ವಹಣೆಗಾಗಿ ನಿರ್ಣಾಯಕವಾಗಿದೆ. ಆಯ್ದ ಗಿಡಗಳ ನೆಡುತೋಪು ಮತ್ತು ಮಣ್ಣಿನ ಸಂಯೋಜನೆಯಿಂದ ಭೂಮಿಯ ಚೇತರಿಕೆಯನ್ನು ಉತ್ತಮಪಡಿಸಬಹುದು. ಇದರಿಂದ ಗಣಿಗಾರಿಕೆ ವ್ಯವಹಾರಗಳಿಗೆ ಮಾತ್ರವಲ್ಲದೆ, ಸ್ಥಳೀಯ ಸಮುದಾಯಕ್ಕೆ ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಪರಿಸರಾತ್ಮಕವಾಗಿ ಪ್ರಯೋಜನವು ದೊರೆಯುತ್ತದೆ. ನೆಡುತೋಪುಗಳು ಹೊಂದಿರಬೇಕಾದ ಗುಣಲಕ್ಷಣಗಳ ಮಹತ್ವವನ್ನು ಸಂಶೋಧನೆಗಳು ಒತ್ತಿ ಹೇಳಿವೆ. ನೆಡುತೋಪುಗಳು ಒತ್ತಡ ಸಹಿಷ್ಣುತೆ, ಹವಾಮಾನ ಸ್ಥಿತಿಸ್ಥಾಪಕತ್ವ ಹೊಂದಿರಬೇಕು. ಜೊತೆಗೆ ಸ್ಥಳೀಯ ಪರಿಸರ ವ್ಯವಸ್ಥೆಗೆ ಹೊಂದಿಕೊಳ್ಳುವಂತಹದ್ದಾಗಿರಬೇಕು. ಅಂತಾರಾಷ್ಟ್ರೀಯ ನೀತಿ ಉದ್ದೇಶಗಳು ಮತ್ತು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಪರಿಸರ ವ್ಯವಸ್ಥೆಯನ್ನು ಮರುಸ್ಥಾಪನೆ ಮಾಡುವುದು ಅತ್ಯಗತ್ಯ.

ಗಣಿಗಾರಿಕೆ ಮತ್ತು ಯೋಜಿತವಲ್ಲದ ಗಣಿ ಮುಚ್ಚುವಿಕೆಯಿಂದಾಗುವ ಪರಿಣಾಮಗಳು

ಗಣಿಗಾರಿಕೆಯು ಅರಣ್ಯನಾಶ, ಆವಾಸಸ್ಥಾನದ ನಷ್ಟ ಮತ್ತು ಅಪಾಯಕಾರಿ ರಾಸಾಯನಿಕ ಮಾಲಿನ್ಯ ಸೇರಿದಂತೆ ಹಲವು ಗಂಭೀರವಾದ ಪರಿಸರ ಸಂಬಂಧಿತ ಹಾಗೂ ಸಾಮಾಜಿಕ ಪರಿಣಾಮಗಳನ್ನು ಹೊಂದಿದೆ. ಇದು ಹಸಿರುಮನೆ ಅನಿಲ ಹೊರಸೂಸುವಿಕೆಯಿಂದಾಗಿ ಸಾಮಾಜಿಕ ಸ್ಥಳಾಂತರ, ಆರ್ಥಿಕ ಬದಲಾವಣೆಗಳು ಮತ್ತು ಹವಾಮಾನ ಬದಲಾವಣೆಗೂ ಕಾರಣವಾಗಬಹುದು.

ಯೋಜಿತವಲ್ಲದ ಗಣಿ ಮುಚ್ಚುವಿಕೆಯಿಂದಾಗಿ ಪರಿಸರ ಹಾನಿ, ಜಲ ಮಾಲಿನ್ಯ ಮತ್ತು ಆರ್ಥಿಕ ಕುಸಿತದಂತಹ ಸಾಮಾಜಿಕ ಸಮಸ್ಯೆಗಳು ಉದ್ಭವಿಸಬಹುದು. ಈ ಸವಾಲುಗಳನ್ನು ಎದುರಿಸಲು ಸುಸ್ಥಿರತೆ, ಸಮುದಾಯ ಯೋಗಕ್ಷೇಮ ಮತ್ತು ಸಮಗ್ರವಾದ ಗಣಿ ಮುಚ್ಚುವಿಕೆ ಯೋಜನೆಗಳಿಗೆ ಆದ್ಯತೆ ನೀಡುವಂತಹ ಜವಾಬ್ದಾರಿಯುತ ಕಾರ್ಯವಿಧಾನಗಳನ್ನು ಅನುಸರಿಸಬೇಕಾಗುತ್ತದೆ. ಜಾಗತಿಕ ನಿಯಮಗಳು ಮತ್ತು ಶಾಸನಗಳನ್ನು ರೂಪಿಸಲಾಗಿದ್ದರೂ ಅವುಗಳ ಅನುಷ್ಠಾನದಲ್ಲಿ, ಅದರಲ್ಲೂ ವಿಶೇಷವಾಗಿ ಅಭಿವೃದ್ಧಿಶೀಲ ದೇಶಗಳ ನಡುವೆ ಅವುಗಳ ಜಾರಿಯಲ್ಲಿ ಬಹಳ ವ್ಯತ್ಯಾಸವಿದೆ. ಆದ್ದರಿಂದ, ಈ ಪರಿಣಾಮಗಳನ್ನು ಅರ್ಥಮಾಡಿಕೊಳ್ಳುವುದು ಸುಸ್ಥಿರ ಕಾರ್ಯವಿಧಾನಗಳ ಅನುಸರಣೆಗೆ ಅತ್ಯಂತ ನಿರ್ಣಾಯಕವಾಗಿದೆ.

ಸುಸ್ಥಿರ ಗಣಿ ಮರುಸ್ಥಾಪನೆ

ಪರಿಸರ ಮತ್ತು ಸಮುದಾಯಗಳ ಮೇಲೆ ಗಣಿಗಾರಿಕೆ ಹಾಗೂ ಅವುಗಳ ಮುಚ್ಚುವಿಕೆಯ ಪರಿಣಾಮಗಳನ್ನು ತಗ್ಗಿಸಲು ಸುಸ್ಥಿರ ಗಣಿ ಮರುಸ್ಥಾಪನಾ ಯೋಜನೆಗಳನ್ನು ರೂಪಿಸುವುದು ನಿರ್ಣಾಯಕವಾಗಿದೆ. ಗಣಿಗಾರಿಕೆ ಪ್ರದೇಶಗಳ ಪರಿಣಾಮಕಾರಿ ಪುನರ್ವಸತಿಯನ್ನು ಖಾತರಿಪಡಿಸಲು ಅಂತಹ ಯೋಜನೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಗಣಿಗಾರಿಕೆ ಪೂರ್ವ ಹಂತದಲ್ಲಿ ಯಾವುದೇ ಪರಿಸರ ವ್ಯವಸ್ಥೆಗಳು ಹೊಂದಿದ್ದಂತಹ ಮೂಲ ಸ್ಥಿತಿಯ ಸೂಕ್ತ ಮೌಲ್ಯಮಾಪನವು ಮಾಹಿತಿಯುಕ್ತ ನಿರ್ಧಾರ ತೆಗೆದುಕೊಳ್ಳಲು ಅತ್ಯಗತ್ಯವಾಗಿದೆ. ಪರಿಸರ ಮತ್ತು ಸಾಮಾಜಿಕ ಗುರಿಗಳು ಸ್ಥಳೀಯ ಅಗತ್ಯಗಳು ಮತ್ತು ಸಂರಕ್ಷಣಾ ಗುರಿಗಳೊಂದಿಗೆ ಹೊಂದಿಕೆಯಾಗಬೇಕು. ಸ್ಥಳೀಯ ಪ್ರಭೇದದ ಮರಗಳ ಮರು ನೆಡುವಿಕೆ, ಆವಾಸಸ್ಥಾನದ ಪುನರ್‌ನಿರ್ಮಾಣ ಮತ್ತು ಮಣ್ಣಿನ ಸ್ಥಿರೀಕರಣವನ್ನು ಸೂಕ್ತವಾದ ಅನುಷ್ಠಾನ ತಂತ್ರಗಳು ಒಳಗೊಂಡಿರುತ್ತವೆ. ಮೇಲ್ವಿಚಾರಣೆ ಮತ್ತು ಹೊಂದಾಣಿಕೆ ನಿರ್ವಹಣೆಯ ಮೂಲಕ ಪ್ರಗತಿ ಹಾಗೂ ದೀರ್ಘಕಾಲೀನ ಯಶಸ್ಸನ್ನು ಖಾತರಿಪಡಿಸಬಹುದಾಗಿದೆ. ಸಂಬಂಧಪಟ್ಟ ಎಲ್ಲಾ ಮಧ್ಯಸ್ಥಗಾರರನ್ನು ತೊಡಗಿಸಿಕೊಳ್ಳುವುದರಿಂದ ಈ ನಿಟ್ಟಿನಲ್ಲಿ ಬೆಂಬಲವನ್ನು ಹೆಚ್ಚಿಸಬಹುದು. ಅಂತಿಮವಾಗಿ, ಈ ಯೋಜನೆಗಳು ಪರಿಸರ ಆರೋಗ್ಯ, ಸಮುದಾಯ ಯೋಗಕ್ಷೇಮ, ಖಾಸಗಿ ವಲಯದ ಒಳಗೊಳ್ಳುವಿಕೆ ಮತ್ತು ಪರಿಸರ ಸ್ಥಿತಿಸ್ಥಾಪಕತ್ವದ ನಡುವಿನ ಪರಸ್ಪರ ಅನ್ಯೋನ್ಯತೆಯನ್ನು ಗುರುತಿಸುತ್ತವೆ. ಜೊತೆಗೆ ಈ ಯೋಜನೆಗಳು ಸುಸ್ಥಿರತೆಯನ್ನು ಗಟ್ಟಿಗೊಳಿಸುತ್ತವೆ.

ಭಾರತದ ಗಣಿಗಾರಿಕೆ

ಕಲ್ಲಿದ್ದಲು ಗಣಿಗಳಲ್ಲಿ ಸುಸ್ಥಿರ ಗಣಿಗಾರಿಕೆಯನ್ನು ಉತ್ತೇಜಿಸಲು ಗಣಿ ಸಚಿವಾಲಯವು ಹಲವು ಕ್ರಮಗಳನ್ನು ಜಾರಿಗೊಳಿಸಿದೆ. ʻಖನಿಜ ಸಂರಕ್ಷಣೆ ಮತ್ತು ಅಭಿವೃದ್ಧಿ ನಿಯಮಗಳು (ಎಂಸಿಡಿಆರ್)-2017ʼ ನೀತಿಯು ಪರಿಸರದ ಮೇಲೆ ಪರಿಣಾಮ ಹಾಗೂ ಇಂಗಾಲದ ಹೆಜ್ಜೆಗುರುತನ್ನು ಕಡಿಮೆ ಮಾಡುವ ನಿಯಮಗಳನ್ನು ರೂಪಿಸುತ್ತದೆ. ಇದರಲ್ಲಿ ಮೇಲ್ಮಣ್ಣನ್ನು ತೆಗೆಯುವುದು ಮತ್ತು ಸದ್ಬಳಕೆ ಮಾಡುವುದು; ತ್ಯಾಜ್ಯ ಬಂಡೆಗಳ ಸಂಗ್ರಹಣೆ; ನೆಲದ ಕಂಪನಗಳು, ಭೂಮಿ ಮೇಲ್ಮೈ ಕುಸಿತ, ವಾಯುಮಾಲಿನ್ಯ, ವಿಷಕಾರಿ ದ್ರವದ ವಿಸರ್ಜನೆ, ಶಬ್ದದ ಬಗ್ಗೆ ಮುನ್ನೆಚ್ಚರಿಕೆ; ಹಾಗೂ ಸಸ್ಯರಾಶಿಯ ಪುನಃಸ್ಥಾಪನೆ ಸೇರಿವೆ.

ಗಣಿಗಾರಿಕೆ ಕಾರ್ಯಾಚರಣೆಯ ಸಮಯದಲ್ಲಿ ಸುಸ್ಥಿರತೆಯ ಹೆಜ್ಜೆಗುರುತುಗಳನ್ನು ಮೌಲ್ಯಮಾಪನ ಮಾಡಲು ʻಸ್ಟಾರ್ ರೇಟಿಂಗ್ʼ ವ್ಯವಸ್ಥೆಯನ್ನು ʻಇಂಡಿಯನ್ ಬ್ಯೂರೋ ಆಫ್ ಮೈನ್ಸ್ʼ ಪರಿಚಯಿಸಿದೆ. ʻಎಂಸಿಡಿಆರ್-2017ʼರ ನಿಯಮ 35ರ ಅಡಿಯಲ್ಲಿ, ಕಾರ್ಯಾಚರಣೆ ಪ್ರಾರಂಭವಾದಾಗಿನಿಂದ ಪ್ರತಿ ಗುತ್ತಿಗೆದಾರನು ಮೂರು-ಸ್ಟಾರ್ ರೇಟಿಂಗ್ ಪಡೆಯಬೇಕಾಗುತ್ತದೆ. ಹಸಿರು ಶಕ್ತಿಯ ಉತ್ಪಾದನೆ ಮತ್ತು ಬಳಕೆ ಉದ್ದೇಶದ ಗಣಿಗಾರಿಕೆ ಗುತ್ತಿಗೆಗಳನ್ನು ಸಚಿವಾಲಯವು ಪ್ರೋತ್ಸಾಹಿಸುತ್ತದೆ. ಪವನ ವಿದ್ಯುತ್ ಮತ್ತು ಸೌರ ವಿದ್ಯುತ್ ಸೇರಿದಂತೆ ಒಟ್ಟು ಸ್ಥಾಪಿತ ನವೀಕರಿಸಬಹುದಾದ ಇಂಧನ ಸ್ಥಾವರ ಸಾಮರ್ಥ್ಯವು ಸುಮಾರು 583 ಮೆಗಾವ್ಯಾಟ್ನಷ್ಟಿದೆ ಎಂಬುದು 293 ಗಣಿಗಳಲ್ಲಿ ನಡೆಸಲಾದ ಸಮೀಕ್ಷೆಯಿಂದ ತಿಳಿದುಬಂದಿದೆ.

ಸುಸ್ಥಿರ ಗಣಿಗಾರಿಕೆ ಕಾರ್ಯವಿಧಾನಗಳನ್ನು ಉತ್ತೇಜಿಸಲು ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಉಪಕ್ರಮಗಳನ್ನು ಕೈಗೊಂಡಿವೆ. ಗಣಿಗಾರಿಕೆ ಮಾಡಿದ ಪ್ರದೇಶಗಳಲ್ಲಿ ಸಸ್ಯ ಮತ್ತು ಪ್ರಾಣಿಗಳ ಬೆಳವಣಿಗೆಗೆ ಸೂಕ್ತವಾಗುವ ರೀತಿಯಲ್ಲಿ ಪುನಃ ಹುಲ್ಲು ಬೆಳೆಸುವಂತೆ ʻಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯʼ(ಎಂಒಇಎಫ್ಸಿಸಿ) 2020ರಲ್ಲಿ ಆದೇಶಿಸಿತು. ಗಣಿ ಬಾಧಿತ ಜಿಲ್ಲೆಗಳಲ್ಲಿ ʻಗಣಿಗಾರಿಕೆ ಪರಿಣಾಮ ಎದುರಿಸಿದ ಪ್ರದೇಶಗಳ ಸಮಗ್ರ ಅಭಿವೃದ್ಧಿ ಯೋಜನೆʼ (ಸಿಇಪಿಎಂಐಝಡ್) ಅನುಷ್ಠಾನದ ಮೇಲ್ವಿಚಾರಣೆ ನಡೆಸಲು ಕರ್ನಾಟಕ ರಾಜ್ಯವು 2014ರಲ್ಲಿ ʻಕರ್ನಾಟಕ ಗಣಿಗಾರಿಕೆ ಪರಿಸರ ಪುನಃಸ್ಥಾಪನಾ ನಿಗಮʼವನ್ನು (ಕೆಎಂಇಆರ್ಸಿ) ಸ್ಥಾಪಿಸಿತು. ನಾಲ್ಕು ಜಿಲ್ಲೆಗಳ 466 ಗ್ರಾಮಗಳನ್ನು ಗಣಿ ಬಾಧಿತ ಎಂದು ಘೋಷಿಸಲಾಗಿದ್ದು, ಅವುಗಳ ಅಭಿವೃದ್ಧಿಗಾಗಿ 24,996.71 ಕೋಟಿ ರೂ.ಗಳ ಕ್ರಿಯಾ ಯೋಜನೆಗೆ ಸುಪ್ರೀಂ ಕೋರ್ಟ್ ಅನುಮೋದನೆ ನೀಡಿದೆ. ʻಎನ್ಎಲ್ಸಿ ಇಂಡಿಯಾʼ ಸಂಸ್ಥೆಯು ತಮಿಳುನಾಡಿನ ನೈವೇಲಿಯಲ್ಲಿ ಗಣಿ-ಮರುಸ್ಥಾಪಿತ ಭೂಮಿಯಲ್ಲಿ 50 ಮೆಗಾವ್ಯಾಟ್ ಸೌರ ಶಕ್ತಿ ಯೋಜನೆಯನ್ನು ಸ್ಥಾಪಿಸುತ್ತಿದೆ.

ಜಿ-20 ಶೃಂಗಸಭೆಯ ಮಹತ್ವ

ʻಜಿ-20 ಜಾಗತಿಕ ಭೂ ಉಪಕ್ರಮʼವನ್ನು ಬಲಪಡಿಸುವ ನಿಟ್ಟಿನಲ್ಲಿ ಭಾರತದ ಜಿ 20 ಶೃಂಗಸಭೆಯು ʻಗಾಂಧಿನಗರ ಅನುಷ್ಠಾನ ಮಾರ್ಗಸೂಚಿʼ(ಜಿಐಆರ್) ಮತ್ತು ʻಗಾಂಧಿನಗರ ಮಾಹಿತಿ ವೇದಿಕೆʼ (ಜಿಐಪಿ) ಅನ್ನು ಪ್ರಾರಂಭಿಸಿದೆ. ಗಣಿಗಾರಿಕೆ ಪೀಡಿತ ಪ್ರದೇಶಗಳಲ್ಲಿ ಪರಿಸರ ವ್ಯವಸ್ಥೆಯ ಮರುಸ್ಥಾಪನೆಗೆ ವೇಗ ನೀಡುವ ನಿಟ್ಟಿನಲ್ಲಿ ಭಾಗವಹಿಸುವ ದೇಶಗಳ ನಡುವೆ ಸಹಯೋಗವನ್ನು ಹೆಚ್ಚಿಸುವ ಗುರಿಯನ್ನು ಈ ಮಾರ್ಗಸೂಚಿ ಹೊಂದಿದೆ. ಇದು ʻಜಿಐಆರ್-ಜಿಐಪಿʼ ಜಾಗತಿಕ ಪಾಲುದಾರರು ಮತ್ತು ದೇಶಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಲಿದೆ. ಜ್ಞಾನ ಹಂಚಿಕೆ, ಹಣಕಾಸು ಒಳಹರಿವು ಮತ್ತು ತಾಂತ್ರಿಕ ಕ್ರೋಢೀಕರಣದ ಬಗ್ಗೆ ಕಾರ್ಯತಂತ್ರದ ಒಳಹರಿವುಗಳನ್ನು ಸಹ ಇದು ಒದಗಿಸುತ್ತದೆ. ಜಾಗತಿಕವಾಗಿ ಪರಸ್ಪರ ಸಹಕಾರದಿಂದ ಕೈಗೊಂಡ ಕ್ರಮಗಳು ಹೇಗೆ ಗಣಿಗಾರಿಕೆ ಆಧಾರಿತ ಭೂ ಮರುಸ್ಥಾಪನೆ ಚಟುವಟಿಕೆಗಳನ್ನು ಹೆಚ್ಚಿಸಬಲ್ಲವು ಎಂಬುದರ ಕುರಿತು ಇದು ಮಾನದಂಡವನ್ನು ಸೃಷ್ಟಿಸುತ್ತದೆ. ಗಣಿಗಾರಿಕೆ ಉದ್ಯಮಗಳನ್ನು ಸಾಮಾಜಿಕ, ಪರಿಸರ ಮತ್ತು ಆರ್ಥಿಕ ಸುಸ್ಥಿರತೆಯ ಮಾರ್ಗಸೂಚಿಗಳೊಂದಿಗೆ ಹೊಂದಾಣಿಕೆ ಮಾಡುವ ಗುರಿಯನ್ನು ಈ ಉಪಕ್ರಮವು ಹೊಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!