ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಆಫ್ರಿಕಾದ ಗಿನಿ ಪ್ರಾಂತ್ಯದಲ್ಲಿ ಮಾರ್ಬರ್ಗ್ ವೈರಸ್ (Marburg Virus) ಕಾಣಿಸಿಕೊಂಡಿದೆ. ಎಬೋಲಾ (Ebola) ಮಾದರಿಯಲ್ಲಿರುವ ಈ ವೈರಸ್ನಿಂದಾಗಿ ಒಂಬತ್ತು ಮಂದಿ ಮೃತಪಟ್ಟಿರುವುದನ್ನು ವಿಶ್ವ ಆರೋಗ್ಯ ಸಂಸ್ಥೆ ದೃಢಪಡಿಸಿದೆ.
ಈಗಾಗಲೇ ಮಾರ್ಬರ್ಗ್ ರೋಗ ಲಕ್ಷಣಗಳನ್ನು ಹೊಂದಿರುವ ೧೬ ಪ್ರಕರಣಗಳು ವರದಿಯಾಗಿದ್ದು, ಸುಮಾರು ೨೦೦ ಮಂದಿ ನಿಗಾದಲ್ಲಿದ್ದು, ಸೋಂಕಿತರ ಮಾದರಿಗಳನ್ನು ಸೆನೆಗಲ್ನಲ್ಲಿರುವ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿಯನ್ನು ನಿರೀಕ್ಷಿಸಲಾಗಿದೆ.
ಎಬೋಲಾ ಮಾದರಿಯ ಈ ವೈರಸ್ ಬಾವಲಿಗಳಿಂದ ಮಾನವರಿಗೆ ಹರಡಿದ್ದು, ಈಗ ಮಾನವರಲ್ಲೇ ಪ್ರಸರಣವಾಗುತ್ತಿದೆ. ದೇಹದ ದ್ರವಗಳ ಮೂಲಕ ಮತ್ತು ಈ ದ್ರವಗಳು ತಾಗಿದ ವಸ್ತುಗಳನ್ನು ಇತರರು ಸ್ಪರ್ಶಿಸುವ ಮೂಲಕ ಇದು ಒಬ್ಬರಿಂದೊಬ್ಬರಿಗೆ ಹರಡುತ್ತಿದೆ. ಈ ರೋಗ ಲಕ್ಷಣ ಕಾಣಿಸಿಕೊಂಡವರಲ್ಲಿ ಸಾವಿನ ಸಾಧ್ಯತೆ ಶೇ.೮೮ ಇದೆ. ಈ ಹಿಂದೆ ಜರ್ಮನಿಯ ಫ್ರಾಂಕ್ಫರ್ಟ್ ಮತ್ತು ಸೆರ್ಬಿಯಾದ ಬೆಲ್ಗ್ರೇಡ್ಗಳಲ್ಲಿ ಈ ರೋಗ ಹರಡಿತ್ತು. ಈ ವೈರಾಣು ವರದಿಯಾಗಿರುವ ಪ್ರಾಂತ್ಯಗಳಲ್ಲಿ ಪ್ರಯಾಣಕ್ಕೆ ನಿರ್ಬಂಧಗಳನ್ನು ವಿಧಿಸಲಾಗಿದೆ.
ಲಕ್ಷಣಗಳೇನು?
ಅತಿಯಾದ ಜ್ವರ, ತಲೆನೋವು, ಮೈಕೈ ನೋವು, ರಕ್ತಮಿಶ್ರಿತ ವಾಂತಿ, ಹೊಟ್ಟೆನೋವು, ಡಯರಿಯಾದಂಥ ಲಕ್ಷಣಗಳು ರೋಗಿಗಳಲ್ಲಿ ವರದಿಯಾಗುತ್ತಿವೆ. ರೋಗ ಮುಂದುವರಿದಂತೆ, ಗುಳಿಬಿದ್ದ ಕಣ್ಣುಗಳು, ಪೇಲವ ಮುಖ, ಸಿಕ್ಕಾಪಟ್ಟೆ ಸುಸ್ತು, ದೇಹದ ಒಂದಕ್ಕಿಂತ ಹೆಚ್ಚು ಭಾಗಗಳಲ್ಲಿ ರಕ್ತಸ್ರಾವ, ಮಾನಸಿಕ ಗೊಂದಲ ಕಾಣುವುದಾಗಿ ಹೇಳಲಾಗುತ್ತಿದೆ.
ಇದಕ್ಕೆ ಯಾವ ಲಸಿಕೆಗಳೂ ಇಲ್ಲ. ಪ್ರತ್ಯೇಕವಾದ ಚಿಕಿತ್ಸೆಗಳು ಲಭ್ಯವಿಲ್ಲ. ಲಕ್ಷಣಗಳಿಗೆ ಪೂರಕವಾದ ಚಿಕಿತ್ಸೆಗಳನ್ನಷ್ಟೇ ನೀಡಲಾಗುತ್ತಿದೆ.