ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಚಿಲ್ಲರೆ ಹಣದುಬ್ಬರವು ಡಿಸೆಂಬರ್ ತಿಂಗಳಲ್ಲಿ 5.72 ಶೇಕಡಾಗೆ ಇಳಿದಿದ್ದು ಒಂದು ವರ್ಷದಲ್ಲಿಯೇ ಅತ್ಯಂತ ಕನಿಷ್ಟ ಮಟ್ಟವನ್ನು ದಾಖಲಿಸಿದೆ. ಗುರುವಾರ ಬಿಡುಗಡೆಯಾದ ಅಧಿಕೃತ ಮಾಹಿತಿಯ ಪ್ರಕಾರ ನವೆಂಬರ್ ತಿಂಗಳಿನಲ್ಲಿ ಚಿಲ್ಲರೆ ಹಣದುಬ್ಬರವು 5.88 ಶೇಕಡಾದಷ್ಟಿತ್ತು.
ಕಳೆದ ವರ್ಷದ ಇದೇ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರವು 5.66 ಶೇಕಡಾದಷ್ಟಿತ್ತು. ಮುಖ್ಯವಾಗಿ ಆಹಾರ ಬೆಲೆಗಳನ್ನು ಮೃದುಗೊಳಿಸಿರುವುದು ಈ ಇಳಿಕೆಗೆ ಕಾರಣವಾಗಿದೆ. ರಾಷ್ಟ್ರೀಯ ಅಂಕಿಅಂಶ ಕಚೇರಿ (NSO) ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಆಹಾರ ವಸ್ತುಗಖ ಹಣದುಬ್ಬರವು ಡಿಸೆಂಬರ್‌ನಲ್ಲಿ 4.19 ಶೇಕಡಾದಷ್ಟಿದ್ದು, ನವೆಂಬರ್‌ನಲ್ಲಿ 4.67 ಶೇಕಡಾದಷ್ಟಿತ್ತು.
ಈ ವರ್ಷದ ಜನವರಿಯಿಂದ ಚಿಲ್ಲರೆ ಹಣದುಬ್ಬರವು ರಿಸರ್ವ್ ಬ್ಯಾಂಕಿನ ಸಹಿಷ್ಣುತಾ ಮಟ್ಟ 6 ಶೇಕಡಾಕ್ಕಿಂತ ಮೇಲಿತ್ತು. ಆದರೆ ಇದು ನವೆಂಬರ್ ತಿಂಗಳಲ್ಲಿ ಮೊದಲಬಾರಿಗೆ 5.88 ಶೇಕಡಾಗೆ ಇಳಿದಿದೆ. ಡಿಸೆಂಬರ್ ತಿಂಗಳಲ್ಲಿ ವರ್ಷದಲ್ಲಿಯೇ ಕನಿಷ್ಟ ಮಟ್ಟ ದಾಖಲಾಗಿದೆ. ಹಣ್ಣುಗಳು ಮತ್ತು ತರಕಾರಿಗಳು, ಎಣ್ಣೆಗಳು ಮತ್ತು ಮಾಂಸ ಮತ್ತು ಮೀನಿನ ಬೆಲೆಗಳು ನವೆಂಬರ್ ತಿಂಗಳಿಗೆ ಹೋಲಿಸಿದರೆ ಡಿಸೆಂಬರ್ 2022 ರಲ್ಲಿ ಕುಸಿತ ಕಂಡಿದೆ.