ಹೊಸ ದಿಗಂತ ಡಿಜಿಟಲ್ ಡೆಸ್ಕ್
ಎರಡು ದಿನಗಳ ಹಿಂದೆ ನೂಪುರ್ ಶರ್ಮ ಅವರ ಅರ್ಜಿಯೊಂದನ್ನು ತಿರಸ್ಕರಿಸುತ್ತ ಸುಪ್ರೀಂಕೋರ್ಟಿನ ಇಬ್ಬರು ನ್ಯಾಯಮೂರ್ತಿಗಳು ಆಡಿದ್ದ ಮಾತುಗಳು ತೀವ್ರ ಟೀಕೆಗೆ ಗುರಿಯಾಗಿದ್ದವು. ಲಿಖಿತ ಆದೇಶದಲ್ಲಿ ಯಾವುದೇ ಟೀಕೆಯನ್ನು ದಾಖಲಿಸದಿದ್ದರೂ “ದೇಶದಲ್ಲಿ ಆಗುತ್ತಿರುವ ಇತ್ತೀಚಿನ ಹಿಂಸಾತ್ಮಕ ಘಟನೆಗಳಿಗೆಲ್ಲ ನೂಪುರ್ ಶರ್ಮ ಹೇಳಿಕೆಯೇ ಕಾರಣ” ಎಂಬ ಆಕ್ರೋಶದ ಅಭಿಪ್ರಾಯವನ್ನು ಜಸ್ಟೀಸ್ ಪರ್ದಿವಾಲಾ ಮತ್ತು ಜಸ್ಟೀಸ್ ಸೂರ್ಯಕಾಂತ ವ್ಯಕ್ತಪಡಿಸಿದ್ದರು. ಇದೀಗ, ನಿವೃತ್ತ ನ್ಯಾಯಮೂರ್ತಿಗಳ ಗುಂಪೂ ಸೇರಿದಂತೆ ಸಮಾಜದ ಗಣ್ಯರ ವರ್ಗವೊಂದು ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದು ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
15 ನಿವೃತ್ತ ನ್ಯಾಯಮೂರ್ತಿಗಳು, 77 ನಿವೃತ್ತ ಅಧಿಕಾರಿಗಳು ಹಾಗೂ ಸೇನೆಯಿಂದ ನಿವೃತ್ತರಾಗಿರುವ 25 ವ್ಯಕ್ತಿಗಳ ಸಹಿ ಹೊಂದಿರುವ ಪತ್ರವು, ನೂಪುರ್ ಶರ್ಮ ಪ್ರಕರಣದಲ್ಲಿ ಎಲ್ಲ ದೂರುಗಳನ್ನು ಒಂದೆಡೆ ವಿಚಾರಿಸುವ ಅರ್ಜಿಯನ್ನು ತಿರಸ್ಕರಿಸುವ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ತನ್ನ ‘ಲಕ್ಷ್ಮಣರೇಖೆ’ಯನ್ನು ಮೀರಿದೆ ಎಂದು ಆಕ್ಷೇಪಿಸಿದೆ.
ಅರ್ಜಿ ವಿಚಾರಣೆ ವೇಳೆ ತನಗೆ ಸಂಬಂಧವೇಪಡದ ವಿಚಾರದಲ್ಲಿ ಆಕ್ರೋಶದ ಮಾತುಗಳನ್ನಾಡಿರುವುದು ಈ ಹಿಂದೆ ಎಂದೂ ಆಗಿರದ ಘಟನೆ. ಅವರಿಗೆ ಏಕಪಕ್ಷೀಯವಾಗಿ ನ್ಯಾಯ ನಿರಾಕರಿಸುವ ಹಂತದಲ್ಲಿ ಸಂವಿಧಾನದ ಪ್ರಸ್ತಾವನೆ, ಆಶಯಗಳಿಗೇ ಭಂಗ ತರುವಂಥ ಕಾರ್ಯವಾಗಿದೆ ಎಂದು ತಜ್ಞರ ಪತ್ರವು ಕಳವಳ ವ್ಯಕ್ತಪಡಿಸಿದೆ.
“ದೇಶದಲ್ಲಿ ಈಗಾಗುತ್ತಿರುವ ಘಟನೆಗಳಿಗೆ ನೂಪುರ್ ಶರ್ಮ ಹೊಣೆ” ಎಂದು ಹೇಳಿರುವುದಂತೂ ಯಾವ ತರ್ಕವೂ ಇಲ್ಲದ ಹೇಳಿಕೆ. ಅಷ್ಟೇ ಅಲ್ಲ, ಇದು ಉದಯಪುರದಲ್ಲಿ ಹಾಡಹಗಲೇ ಭೀಕರವಾಗಿ ಹತ್ಯೆ ಮಾಡಿದವರ ಕೃತ್ಯವನ್ನು ಮಾಫಿ ಮಾಡಿದಂತಿದೆ ಎಂದೂ ಪತ್ರದಲ್ಲಿ ಹೇಳಲಾಗಿದೆ.
ಎಫ್ ಆ ಆರ್ ಆದಕೂಡಲೇ ನೂಪುರ್ ಶರ್ಮ ಬಂಧನವಾಗಿಬಿಡಬೇಕಿತ್ತು ಎಂದು ಅಭಿಪ್ರಾಯಪಟ್ಟಿರುವುದು ನ್ಯಾಯಿಕ ಸಮುದಾಯವೇ ಅಚ್ಚರಿಪಡುವಂತಿದೆ. ಅರ್ಜಿದಾರಗೆ ನ್ಯಾಯವನ್ನೇ ನಿರಾಕರಿಸುವಂತಿರುವ ಈ ಪ್ರಕ್ರಿಯೆಯನ್ನು ತಿದ್ದಿಕೊಳ್ಳದೇ ಹೋದರೆ ದೇಶದ ಪ್ರಜಾಸತ್ತಾತ್ಮಕ ಮೌಲ್ಯಗಳು ಮತ್ತು ಸುರಕ್ಷತೆಗೆ ಭಾರಿ ಪ್ರಹಾರ ಮಾಡಿದಂತಾಗುತ್ತದೆ ಎಂದು ಪತ್ರ ಎಚ್ಚರಿಸಿದೆ.
ಅರ್ನಾಬ್ ಪ್ರಕರಣ ಉದಾಹರಿಸಿ ಎಫ್ ಐ ಆರ್ ಕುರಿತ ನಿಯಮ ನೆನಪಿಸಿದ ಪತ್ರ
ಅರ್ಜಿದಾರೆಯು ಟಿವಿ ಡಿಬೇಟ್ ಒಂದರಲ್ಲಿ ಪ್ರಚೋದನಾತ್ಮಕವಾಗಿ ಮಾತನಾಡಿದ್ದಾರೆಂಬ ಒಂದೇ ಆರೋಪಕ್ಕೆ ಬೇರೆ ಬೇರೆ ಕಡೆ ಪ್ರಥಮ ಮಾಹಿತಿ ವರದಿಗಳ ದೂರುಗಳು ದಾಖಲಾಗಿವೆ. 2020ರ ಅರ್ನಾಬ್ ಗೋಸ್ವಾಮಿ ಪ್ರಕರಣವೂ ಸೇರಿದಂತೆ ಸರ್ವೋಚ್ಚ ನ್ಯಾಯಾಲಯವೇ ಹಲವು ಪ್ರಕರಣಗಳಲ್ಲಿ ಸ್ಪಷ್ಟಪಡಿಸಿರುವುದೇನೆಂದರೆ- ಒಂದೇ ಅಪರಾಧಕ್ಕೆ ಬೇರೆ ಬೇರೆ ತನಿಖೆಗಳು ಬೇಕಿಲ್ಲ ಎಂಬುದು. ಹಾಗೆ ಮಾಡುವುದು ವ್ಯಕ್ತಿಯ ಮೂಲಭೂತ ಹಕ್ಕಿನ ಉಲ್ಲಂಘನೆ ಆಗುತ್ತದೆ.
ಬೇರೆ ಬೇರೆ ರಾಜ್ಯಗಳಲ್ಲಿ ದಾಖಲಾಗಿರುವ ಎಫ್ ಆ ಆರ್ ಗಳನ್ನು ಒಂದೆಡೆ ಏಕೀಕೃತಗೊಳಿಸುವ ಅಧಿಕಾರ ವ್ಯಾಪ್ತಿ ಹೈಕೋರ್ಟಿಗೆ ಇಲ್ಲ ಎಂಬುದು ಗೊತ್ತಿದ್ದೂ ನೂಪುರ್ ಶರ್ಮ ಅವರನ್ನು ಹೈಕೋರ್ಟಿಗೆ ಹೋಗುವಂತೆ ಸುಪ್ರೀಂಕೋರ್ಟ್ ಮಾಡಿದೆ. ಸುಪ್ರೀಂಕೋರ್ಟ್ ಈ ನಡೆ ಯಾರೂ ಪ್ರಶಂಸಿಸುವಂಥದ್ದಲ್ಲ ಹಾಗೂ ಈ ನೆಲದ ಕಾನೂನಿಗೆ ಸಂಬಂಧಿಸಿ ಅದಕ್ಕಿರುವ ಘನತೆವೆತ್ತ ಸ್ಥಾನದ ಪಾವಿತ್ರ್ಯ ಕುಗ್ಗಿಸುವ ನಡೆ ಇದಾಗಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.