Tuesday, August 16, 2022

Latest Posts

ಡಿಜಿಟಲ್ ವೀಕ್ 2022ದಲ್ಲಿ ಪ್ರಧಾನಿ ಮೋದಿ- ಲೋಕಾರ್ಪಣೆಗೊಂಡ 5 ಡಿಜಿಟಲ್ ವೇದಿಕೆಗಳು ಏನೆಲ್ಲ ಮಾಡಲಿವೆ ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಭಾರತದಲ್ಲಿ ಡಿಜಿಟಲ್ ಇಂಡಿಯಾ ವೀಕ್ 2022 ಅನ್ನು ಉದ್ಘಾಟಿಸಿದರು. ಇದರ ಜೊತೆಗೆ ಡಿಜಿಟಲ್ ಇಂಡಿಯಾ ಭಾಷಿಣಿ, ಡಿಜಿಟಲ್ ಇಂಡಿಯಾ ಜೆನೆಸಿಸ್, ಇಂಡಿಯಾ ಸ್ಟಾಕ್‌ ಗ್ಲೋಬಲ್‌, ಹಾಗೂ ಮೈ ಸ್ಕೀಮ್‌ ಗಳನ್ನೂ ಎಂಬ ಹೆಸರಿನ ನಾಲ್ಕು ಇತರ ಕಾರ್ಯಕ್ರಮವನ್ನೂ ಕೂಡ ಉದ್ಘಾಟನೆ ಮಾಡಿದರು. ಅವುಗಳ ಕುರಿತಾದ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಡಿಜಿಟಲ್ ಇಂಡಿಯಾ ಭಾಷಿಣಿ ಯೋಜನೆ:
ಈ ಯೋಜನೆಯು ಭಾರತೀಯ ಭಾಷೆಗಳಲ್ಲೇ ಇಂಟರ್‌ನೆಟ್‌ ಹಾಗೂ ಡಿಜಿಟಲ್‌ ಸೇವೆಗಳನ್ನು ಪಡೆಯಲು ಸಹಾಯಕವಾಗಿದ್ದು ಧ್ವನಿ ಆಧಾರಿತ ಬಳಕೆಯನ್ನೂ ಒಳಗೊಂಡಿದೆ. ಬಹುಭಾಷಾ ಸಂಯೋಜನೆಯ ಡೇಟಾ ಸೆಟ್‌ ಗಳನ್ನು ನಿರ್ಮಿಸಿ AI (ಆರ್ಟಿಇಶಿಯಲ್‌ ಇಂಟೆಲಿಜೆನ್ಸ್)‌ ಆಧಾರಿತ ಭಾಷಾ ತಂತ್ರಜ್ಞಾನ ಪರಿಹಾರವನ್ನು ನಿರ್ಮಿಸಲು ಚಿಂತಿಸಲಾಗಿದ್ದು ಭಾಷಾದಾನ ಎಂಬ ಕ್ರೌಡ್‌ ಸೋರ್ಸಿಂಗ್‌ ಉಪಕ್ರಮದ ಮೂಲಕ ಈ ಡೇಟಾ ಸೆಟ್‌ ಗಳನ್ನು ನಿರ್ಮಿಸಲಾಗುತ್ತಿದೆ. ಇಂಡಿಯಾ ಭಾಷಿಣಿ ಯೋಜನೆಯು ಈ ಡೇಟಾ ಸೆಟ್‌ ನಿರ್ಮಿಸಲು ನಾಗರೀಕರ ತೊಡಗಿಸಿಕೊಳ್ಳುವಿಕೆಗೆ ಸಹಾಯಕವಾಗಲಿದೆ.

ಡಿಜಿಟಲ್ ಇಂಡಿಯಾ ಜೆನೆಸಿಸ್:
ಈ ಯೋಜನೆಯ ಮೂಲಕ ಭಾರತದ ಶ್ರೇಣಿ-II ಮತ್ತು ಶ್ರೇಣಿ-III ನಗರಗಳಲ್ಲಿ ಆವಿಷ್ಕಾರಿ ನವೋದ್ಯಮಿಗಳಿಗೆ ಹೊಸತನದ ಅನ್ವೇಷಣೆಗೆ ಪೂರಕವಾಗಬಲ್ಲ ವೇದಿಕೆಯೊಂದನ್ನು ರಚಿಸಿ ಅವರ ಬೆಳವಣಿಗೆಗೆ ಅಗತ್ಯವಿರುವ ಬೆಂಬಲಗಳನ್ನು ಇಂಡಿಯಾ ಜೆನೆಸಿಸ್‌ ಮೂಲಕ ನೀಡಲಾಗುತ್ತದೆ.

ಇಂಡಿಯಾ ಸ್ಟೇಕ್.‌ಗ್ಲೋಬಲ್‌ (Indiastack.global) :
ಇದು ಆಧಾರ್‌, UPI, ಡಿಜಿಲಾಕರ್, ಕೋವಿನ್ ವ್ಯಾಕ್ಸಿನೇಷನ್ ಪ್ಲಾಟ್‌ಫಾರ್ಮ್, ಸರ್ಕಾರಿ ಇ-ಮಾರ್ಕೆಟ್‌ಪ್ಲೇಸ್ (GeM), DIKSHA ಪ್ಲಾಟ್‌ಫಾರ್ಮ್ ಮತ್ತು ಆಯುಷ್ಮಾನ್ ಭಾರತ್ ಡಿಜಿಟಲ್ ಹೆಲ್ತ್ ಮಿಷನ್‌ನಂತಹ ಇಂಡಿಯಾ ಸ್ಟಾಕ್ ಅಡಿಯಲ್ಲಿ ಜಾರಿಗೊಳಿಸಲಾದ ಪ್ರಮುಖ ಯೋಜನೆಗಳ ಜಾಗತಿಕ ಭಂಡಾರವಾಗಿದೆ. ಇದು ಜಗತ್ತಿನ ಇತರ ದೇಶಗಳು ಭಾರತದ ಸಹಾಯದೊಂದಿಗೆ ಇಂತಹ ಯೋಜನೆ ಜಾರಿ ಮಾಡಿಕೊಳ್ಳಲು ಅನುಕೂಲ ಮಾಡಿಕೊಡುತ್ತದೆ.

ಮೈಸ್ಕೀಮ್ :
ಇದು ಸರ್ಕಾರಿ ಯೋಜನೆಗಳ ಕುರಿತಾಗಿ ಮಾಹಿತಿ ಒದಗಿಸುವ ಶೋಧನಾ ವೇದಿಕೆಯಾಗಿದ್ದು ಜನಸಾಮಾನ್ಯರಿಗೆ ತಮಗೆ ಅಗತ್ಯವಿರುವ ಯೋಜನೆಗಳ ಕುರಿತಾಗಿ ಅನ್ವೇಷಿಸಲು ಒಂದು-ನಿಲುಗಡೆ (ಸಿಂಗಲ್‌ ಸ್ಟಾಪ್)‌ ಪೋರ್ಟಲ್‌ ಒದಗಿಸುವ ಗುರಿ ಹೊಂದಿದೆ. ಇದರ ಮೂಲಕ ಬಳಕೆದಾರರು ತಾವು ಅರ್ಹರಿರುವ ಯೋಜನೆಗಳ ಬಗ್ಗೆ ತಿಳಿದುಕೊಳ್ಳಬಹುದಾಗಿದೆ. ಇದರ ಜೊತೆಗೆ ಮೇರಿ ಪೆಹಚಾನ್‌ ಯೋಜನೆಯನ್ನೂ ಸಹ ಮೋದಿ ಗುರುತಿಸಿದ್ದು ಹಲವು ಆನ್‌ಲೈನ್ ಅಪ್ಲಿಕೇಶನ್‌ಗಳು ಅಥವಾ ಸೇವೆಗಳಿಗೆ ಒಂದೇ ರುಜುವಾತನ್ನು ಒದಗಿಸುವ ಗುರಿ ಹೊಂದಿದೆ.

ಚಿಪ್ಸ್ ಟು ಸ್ಟಾರ್ಟ್ಅಪ್ (C2S) :
ಇದರಡಿಯಲ್ಲಿ ಚಿಪ್‌ ಅಥವಾ ಸೆಮಿಕಂಡಕ್ಟರ್‌ ಉತ್ಪಾದನೆಗೆ ಉತ್ತೇಜನ ನೀಡಲಾಗುತ್ತಿದ್ದು ಈಗಾಗಲೇ ಗುರುತಿಸಲ್ಪಟ್ಟ 30 ಸಂಸ್ಥೆಗಳ ಮೊದಲ ಸಮೂಹವನ್ನು ಮೋದಿ ಘೋಷಣೆ ಮಾಡಿದ್ದಾರೆ. ಇದು ಪದವಿ, ಸ್ನಾತಕೋತ್ತರ ಮತ್ತು ಸಂಶೋಧನಾ ಹಂತಗಳಲ್ಲಿ ಸೆಮಿಕಂಡಕ್ಟರ್ ಚಿಪ್‌ಗಳ ವಿನ್ಯಾಸದ ಕ್ಷೇತ್ರದಲ್ಲಿ ಮಾನವಶಕ್ತಿಯನ್ನು ತರಬೇತಿ ಮಾಡುವ ಗುರಿಯನ್ನು ಹೊಂದಿದೆ ಮತ್ತು ಭಾರತದಲ್ಲಿ ಸೆಮಿಕಂಡಕ್ಟರ್‌ ವಿನ್ಯಾಸದ ಕ್ಷೇತ್ರದಲ್ಲಿ ಕೆಲಸ ಮಾಡುವ ಸ್ಟಾರ್ಟ್‌ಅಪ್‌ಗಳಿಗೆ ಈ ಯೋಜನೆಯ ಅಡಿಯಲ್ಲಿ ಉತ್ತೇಜನ ನೀಡಲಾಗುತ್ತಿದ್ದು ಸಾಂಸ್ಥಿಕ ಮಟ್ಟದಲ್ಲಿ ಮಾರ್ಗದರ್ಶನ ಹಾಗೂ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸುವಲ್ಲಿ ಸಹಾಯಕವಾಗಿದೆ.

ಭಾರತವು ಚಿಪ್ ಖರೀದಿದಾರನಿಂದ ಚಿಪ್ ತಯಾರಕರಾಗಲು ಬಯಸುತ್ತದೆ. ಮುಂದಿನ ಮೂರು-ನಾಲ್ಕು ವರ್ಷಗಳಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನೆಯನ್ನು 300 ಶತಕೋಟಿ ಡಾಲರ್‌ಗಿಂತ ಹೆಚ್ಚಿನ ಮಟ್ಟಕ್ಕೆ ಕೊಂಡೊಯ್ಯುವ ಗುರಿಯಲ್ಲಿ ಭಾರತ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರಧಾನಿ ಮೋದಿ ಈ ಸಂದರ್ಭದಲ್ಲಿ ಹೇಳಿದರು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss