April 3, 2026
Friday, April 3, 2026
spot_img

ವೇದಿಕೆ ಮೇಲೆ ದಿಢೀರ್ ಕುಸಿದು ಬಿದ್ದ ನಿವೃತ್ತ ನ್ಯಾ. ಸಂತೋಷ್ ಹೆಗ್ಡೆ: ಆಸ್ಪತ್ರೆಗೆ ದಾಖಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಿವೃತ್ತ ಲೋಕಾಯುಕ್ತ ಹಾಗೂ ನಿವೃತ್ತ ನ್ಯಾಯಮೂರ್ತಿಗಳಾದ ಸಂತೋಷ್ ಹೆಗ್ಡೆ ಅವರು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವೇಳೆ ದಿಢೀರ್ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಹಿರಿಯ ರಾಜಕಾರಣಿ ಪಿ.ಜಿ.ಆರ್ ಸಿಂಧ್ಯ ಅವರಿಗೆ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಸಂತೋಷ್ ಹೆಗ್ಡೆ ಪಾಲ್ಗೊಂಡಿದ್ದರು. ಕಾರ್ಯಕ್ರಮದ ನಡುವೆಯೇ ಅವರಿಗೆ ವಾಂತಿಯಾಗಿದ್ದು, ತೀವ್ರ ಅಸ್ವಸ್ಥರಾಗಿದ್ದಾರೆ. ಕೂಡಲೇ ವೇದಿಕೆಯಿಂದ ಇಳಿದು ಮನೆಗೆ ಹೊರಡಲು ಸಿದ್ಧರಾದಾಗ ಅವರು ಕುಸಿದು ಬಿದ್ದಿದ್ದಾರೆ.

ಸ್ಥಳದಲ್ಲಿ ಅಂಬುಲೆನ್ಸ್ ಲಭ್ಯವಿಲ್ಲದ ಕಾರಣ, ಅಲ್ಲಿಯೇ ಇದ್ದ ವಿಧಾನಸಭಾ ಸಭಾಧ್ಯಕ್ಷರಾದ ಯು.ಟಿ. ಖಾದರ್ ಅವರು ತಕ್ಷಣವೇ ಸ್ಪಂದಿಸಿದರು. ತಮ್ಮದೇ ಅಧಿಕೃತ ವಾಹನದಲ್ಲಿ ಸಂತೋಷ್ ಹೆಗ್ಡೆ ಅವರನ್ನು ಹತ್ತಿರದ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದರು.

ರಕ್ತದಲ್ಲಿನ ಸಕ್ಕರೆ ಪ್ರಮಾಣ ದಿಢೀರ್ ಕುಸಿತ ಕಂಡಿದ್ದರಿಂದ ಅವರು ಅಸ್ವಸ್ಥರಾಗಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.

“ಸದ್ಯ ಹೆಗ್ಡೆ ಅವರ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಆತಂಕ ಪಡುವ ಅಗತ್ಯವಿಲ್ಲ” ಎಂದು ಯು.ಟಿ. ಖಾದರ್ ಮಾಹಿತಿ ನೀಡಿದ್ದಾರೆ. ಆಸ್ಪತ್ರೆಗೆ ಸಂತೋಷ್ ಹೆಗ್ಡೆ ಅವರ ಕುಟುಂಬಸ್ಥರು ಭೇಟಿ ನೀಡಿದ್ದು, ಚಿಕಿತ್ಸೆ ಮುಂದುವರಿದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !