Monday, December 4, 2023

Latest Posts

ವಿಶ್ರಾಂತ ಶಿಕ್ಷಕಿ ಕೊಡೆತ್ತೂರು ಗಾಯತ್ರಿ ಎಸ್.ಉಡುಪ ನಿಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಹುಮುಖ ಪ್ರತಿಭೆ, ವಿಶ್ರಾಂತ ಶಿಕ್ಷಕಿ ಕೊಡೆತ್ತೂರು ಗಾಯತ್ರಿ ಎಸ್.ಉಡುಪ ಮಂಗಳವಾರ ದೆಹಲಿಯ ಸಹೋದರನ ಮನೆಯಲ್ಲಿ ಅಲ್ಪಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು.

ಅವರು ಪತಿ ಕಿನ್ನಿಗೋಳಿಯ ಅನಂತ ಪ್ರಕಾಶ ಮತ್ತು ಗಾಯತ್ರಿ ಪ್ರಕಾಶನದ ಸ್ಥಾಪಕರಾದ ಸಚ್ಚಿದಾನಂದ ಉಡುಪ, ಹೊಸ ದಿಗಂತ ವರದಿಗಾರ ಮಿಥುನ್ ಕೊಡೆತ್ತೂರು ಸಹಿತ ಮೂವರು ಪುತ್ರರು ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆ ಬುಧವಾರ ಸ್ವಗೃಹ ಕೊಡೆತ್ತೂರಿನಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಗಾಯತ್ರಿ ಉಡುಪ ಅವರು ಸಾಹಿತಿಯಾಗಿದ್ದು; ಆರು ಕೃತಿಗಳು ಪ್ರಕಟಗೊಂಡಿವೆ. ಗಾಯತ್ರಿ ಪ್ರಕಾಶನದ ಸ್ಥಾಪನೆ ಮತ್ತು ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಜೂನಿಯರ್ ಗ್ರೇಡ್ ಪಡೆದಿದ್ದ ಗಾಯತ್ರಿ ಉಡುಪ ಸಂಗೀತ ತರಗತಿಯ ಮೂಲಕ ಆಸಕ್ತರಿಗೆ ಸಂಗೀತ ಕಲಿಸುತ್ತಿದ್ದರು.

ಆಕಾಶವಾಣಿ ಬಿ ಶ್ರೇಣಿ ಕಲಾವಿದರೂ ಆಗಿದ್ದ ಅವರು ಅನೇಕ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿದ್ದರು. ನಾಟಕ, ಯಕ್ಷಗಾನ ಕಲಾವಿದರಾಗಿಯೂ ಜನ ಮನ್ನಣೆ ಗಳಿಸಿದ್ದರು. 22 ವರ್ಷಗಳ ಹಿಂದೆ ವಾಗ್ದೇವಿ ಭಜನಾ ಮಂಡಳಿ ಸ್ಥಾಪಿಸಿ ಮಹಿಳೆಯರು ಭಜನೆಯಲ್ಲಿ ತೊಡಗಿಸಿಕೊಳ್ಳುವಲ್ಲಿ ಪ್ರಧಾನ ಪಾತ್ರ ವಹಿಸಿದ್ದರು. ಜೆಸಿರೇಟ್ ಕಿನ್ನಿಗೋಳಿಯ ಅಧ್ಯಕ್ಷೆಯಾಗಿ, ರಾಜ್ಯ ತರಬೇತುದಾರರಾಗಿ, ಸಂಘಟಕರಾಗಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು.

ಗಾಯತ್ರಿ ಉಡುಪ ಪ್ರಸ್ತುತ ಮೂಲ್ಕಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿದ್ದರು. ಗಾಯತ್ರಿ ಉಡುಪ ಅವರ ನಿಧನಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ಗಾಢ ಸಂತಾಪ ವ್ಯಕ್ತ ಪಡಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!