July 4, 2026
Saturday, July 4, 2026
spot_img

ವಿಶ್ವಕಪ್ ಬೆನ್ನಲ್ಲೇ ನಿವೃತ್ತಿ? ಕೊನೆಗೂ ಮೌನ ಮುರಿದ ಕ್ರಿಸ್ಟಿಯಾನೊ ರೊನಾಲ್ಡೊ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಫುಟ್‌ಬಾಲ್ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ (Cristiano Ronaldo) ಅವರ ನಿವೃತ್ತಿಯ ಕುರಿತು ಹಬ್ಬಿದ್ದ ವದಂತಿಗಳಿಗೆ ಸ್ವತಃ ಅವರೇ ತೆರೆ ಎಳೆದಿದ್ದಾರೆ. ಪ್ರಸಕ್ತ ಫಿಫಾ ವಿಶ್ವಕಪ್ ಟೂರ್ನಿಯು ರೊನಾಲ್ಡೊ ಪಾಲಿಗೆ ಕೊನೆಯಾಗಲಿದೆ ಎಂದು ಅವರ ಸಹೋದರಿ ಕಟಿಯಾ ಅವೆರೋ ನೀಡಿದ್ದ ಹೇಳಿಕೆಯನ್ನು ರೊನಾಲ್ಡೊ ಸ್ಪಷ್ಟವಾಗಿ ನಿರಾಕರಿಸಿದ್ದಾರೆ.

ಸಹೋದರಿ ಹೇಳಿದ್ದೇನು?

ಇತ್ತೀಚೆಗೆ ಪೋರ್ಚುಗಲ್ ಮಾಧ್ಯಮವೊಂದರ ಜೊತೆ ಮಾತನಾಡಿದ್ದ ರೊನಾಲ್ಡೊ ಸಹೋದರಿ ಕಟಿಯಾ ಅವೇರೋ, “ನನಗೆ ಸಿಕ್ಕಿರುವ ಮಾಹಿತಿ ಪ್ರಕಾರ ಇದು ರೊನಾಲ್ಡೊ ಅವರ ಕೊನೆಯ ಟೂರ್ನಿಯಾಗಬಹುದು. ಹಾಗಾಗಿ ಅವರು ಮೈದಾನದಲ್ಲಿ ಆಡುತ್ತಿರುವುದನ್ನು ನಾವೆಲ್ಲರೂ ಸಂಭ್ರಮಿಸಬೇಕು,” ಎಂದು ಹೇಳುವ ಮೂಲಕ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದ್ದರು.

ರೊನಾಲ್ಡೊ ಖಡಕ್ ಸ್ಪಷ್ಟನೆ

ಸಹೋದರಿಯ ಹೇಳಿಕೆ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಪೋರ್ಚುಗಲ್‌ನ ಸ್ಟಾರ್‌ ಆಟಗಾರ, ತಾವು ಸದ್ಯಕ್ಕೆ ಯಾವುದೇ ನಿವೃತ್ತಿ ನಿರ್ಧಾರ ಕೈಗೊಳ್ಳುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. “ಯಾವುದೇ ಕಾರಣಕ್ಕೂ ನಾನು ಆತುರದಲ್ಲಿ ನಿವೃತ್ತಿಯ ತೀರ್ಮಾನ ತೆಗೆದುಕೊಳ್ಳುವುದಿಲ್ಲ. ವಿಶ್ವಕಪ್‌ನಲ್ಲಿ ಗೆಲುವು ಅಥವಾ ಸೋಲು ಏನೇ ಆದರೂ, ಅದರ ಬಳಿಕ ಮುಂದಿನ ಹೆಜ್ಜೆಯ ಬಗ್ಗೆ ಯೋಚಿಸಲು ನನಗೆ ಸಾಕಷ್ಟು ಸಮಯವಿದೆ,” ಎಂದು ರೊನಾಲ್ಡೊ ಹೇಳಿದ್ದಾರೆ.

“ನನ್ನ ಭವಿಷ್ಯದ ಕುರಿತು ಕುಟುಂಬದ ಸದಸ್ಯರ ಜೊತೆ ಸುದೀರ್ಘವಾಗಿ ಚರ್ಚಿಸಿದ ಬಳಿಕವಷ್ಟೇ ಅಂತಿಮ ನಿರ್ಧಾರ ಕೈಗೊಳ್ಳುತ್ತೇನೆ.” — ಕ್ರಿಸ್ಟಿಯಾನೊ ರೊನಾಲ್ಡೊ

ಈ ಮೂಲಕ ರೊನಾಲ್ಡೊ ಸದ್ಯಕ್ಕಂತೂ ಮೈದಾನದಿಂದ ದೂರ ಸರಿಯುವುದಿಲ್ಲ ಎಂಬುದು ಸ್ಪಷ್ಟವಾಗಿದ್ದು, ಕೋಟ್ಯಂತರ ಅಭಿಮಾನಿಗಳು ನಿಟ್ಟುಸಿರು ಬಿಡುವಂತಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !