ಪೋಷಕರನ್ನು ನೋಡಿಕೊಳ್ಳಲು ವಿಫಲವಾದರೆ ಮಕ್ಕಳಿಗೆ ನೀಡಿದ ಅಸ್ತಿ ವಾಪಾಸ್: ಹೈಕೋರ್ಟ್ ಮಹತ್ವದ ತೀರ್ಪು

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮ್ಮ ಮಕ್ಕಳು ಅಥವಾ ಹತ್ತಿರದ ಸಂಬಂಧಿಕರು ತಮ್ಮನ್ನು ನೋಡಿಕೊಳ್ಳಲು ವಿಫಲವಾದರೆ ಅಂಥವರ ಹೆಸರಿಗೆ ಬರೆಯಲಾದ ಗಿಫ್ಟ್​ ಡೀಡ್ ಅಥವಾ ಸೆಟ್ಲ್‌ಮೆಂಟ್ ಡೀಡ್​ಗಳನ್ನು ಹಿರಿಯ ನಾಗರಿಕರು ರದ್ದು ಮಾಡಬಹುದು ಎಂದು ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಮೃತ ಎಸ್.ನಾಗಲಕ್ಷ್ಮಿ ಅವರ ಸೊಸೆ ಎಸ್.ಮಾಲಾ ಎಂಬವರು ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿಗಳಾದ ಎಸ್.ಎಂ.ಸುಬ್ರಮಣ್ಯಂ ಮತ್ತು ಕೆ.ರಾಜಶೇಖರ್ ಅವರಿದ್ದ ವಿಭಾಗೀಯ ಪೀಠ ತೀರ್ಪು ನೀಡಿದೆ .

ನಾಗಲಕ್ಷ್ಮಿ ತನ್ನ ಮಗ ಕೇಶವನ್ ಅವರ ಹೆಸರಿಗೆ ತನ್ನ ಆಸ್ತಿಯನ್ನು ಸೆಟ್ಲ್‌ಮೆಂಟ್ ಡೀಡ್ ಮಾಡಿ ಕೊಟ್ಟಿದ್ದರು. ತಾನು ಬದುಕಿರುವವರೆಗೆ ಮಗ ಮತ್ತು ಸೊಸೆ ತನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂಬ ಭರವಸೆ ಹಾಗೂ ಅವರ ಮೇಲಿನ ಪ್ರೀತಿಯಿಂದ ಅವರು ಡೀಡ್ ಮಾಡಿಸಿದ್ದರು. ಆದರೆ ಮಗ ಅವರನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ. ಅಲ್ಲದೆ ಮಗ ಸತ್ತ ಮೇಲೆ ಸೊಸೆಯೂ ಅವರನ್ನು ಆರೈಕೆ ಮಾಡಲಿಲ್ಲ. ಹೀಗಾಗಿ ಅವರು ನಾಗಪಟ್ಟಿಣಂನ ಆರ್​ಡಿಒ (ರೆವಿನ್ಯೂ ಡಿವಿಜನ್ ಆಫೀಸರ್) ಅವರನ್ನು ಸಂಪರ್ಕಿಸಿದರು.

ಮಗನ ಭವಿಷ್ಯಕ್ಕಾಗಿ ಡೀಡ್​ ಮಾಡಿಸಿದ್ದೆ ಎಂಬ ಆಕೆಯ ಹೇಳಿಕೆಯನ್ನು ದಾಖಲಿಸಿದ ನಂತರ ಮತ್ತು ಮಾಲಾ ಅವರ ಹೇಳಿಕೆಗಳನ್ನು ಪರಿಗಣಿಸಿದ ನಂತರ, ಆರ್‌ಡಿಒ ಸೆಟ್ಲ್‌ಮೆಂಟ್ ಡೀಡ್ ರದ್ದುಗೊಳಿಸಿದರು.

ಇದನ್ನು ಪ್ರಶ್ನಿಸಿ ಸೊಸೆ ಮಾಲಾ ಸಲ್ಲಿಸಿದ್ದ ಅರ್ಜಿ ವಜಾಗೊಂಡಿತ್ತು. ಹೀಗಾಗಿ ಅವರು ಹೈಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ಈ ಕುರಿತು ವಿಚಾರಣೆ ನಡೆಸಿದ ಕೋರ್ಟ್, ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ, 2007ರ ಸೆಕ್ಷನ್ 23 (1) ಅನ್ನು ಹಿರಿಯ ನಾಗರಿಕರು ತಮ್ಮ ಆಸ್ತಿಯನ್ನು ಗಿಫ್ಟ್ ಡೀಡ್ ಅಥವಾ ಸೆಟ್ಲ್‌ಮೆಂಟ್ ಡೀಡ್ ಮೂಲಕ ವರ್ಗಾಯಿಸುವ ಸಂದರ್ಭಗಳಲ್ಲಿ ಅವರನ್ನು ರಕ್ಷಿಸಲು ವಿನ್ಯಾಸಗೊಳಿಸಲಾಗಿದೆ. ತಮ್ಮ ಹೆಸರಿಗೆ ಆಸ್ತಿ ಬರೆಸಿಕೊಂಡಿರುವವರು ತಮ್ಮ ಜವಾಬ್ದಾರಿಗಳನ್ನು ನಿಭಾಯಿಸಲು ವಿಫಲವಾದರೆ, ಹಿರಿಯ ನಾಗರಿಕರು ಡೀಡ್​ ಅನ್ನು ರದ್ದುಗೊಳಿಸುವಂತೆ ಟ್ರಿಬ್ಯೂನಲ್​ಗೆ ಕೋರುವ ಅಧಿಕಾರ ಹೊಂದಿರುತ್ತಾರೆ ಎಂದು ನ್ಯಾಯಪೀಠ ಹೇಳಿದೆ.

ಹಿರಿಯ ನಾಗರಿಕರಿಂದ, ವಿಶೇಷವಾಗಿ ಮಕ್ಕಳು ಅಥವಾ ಹತ್ತಿರದ ಸಂಬಂಧಿಕರಿಗೆ ಹೆಚ್ಚಾಗಿ ಪ್ರೀತಿ ಮತ್ತು ವಾತ್ಸಲ್ಯದ ಕಾರಣಗಳಿಂದ ಆಸ್ತಿಗಳನ್ನು ಬರೆದು ಕೊಡಲಾಗಿರುತ್ತದೆ ಎಂದು ಕಾಯ್ದೆಯಲ್ಲಿ ಉಲ್ಲೇಖವಾಗಿದೆ. ಹಾಗಾಗಿ ಆಸ್ತಿ ವರ್ಗಾವಣೆಯು ಕೇವಲ ಕಾನೂನು ಪ್ರಕ್ರಿಯೆ ಆಗಿರದೆ ಅದು ವೃದ್ಧಾಪ್ಯದಲ್ಲಿ ಅವರನ್ನು ಆರೈಕೆ ಮಾಡುವ ಭರವಸೆಯೊಂದಿಗೆ ಮಾಡಿದ ನಿರ್ಧಾರವಾಗಿರುತ್ತದೆ. ಆಸ್ತಿ ವರ್ಗಾವಣೆ ಪತ್ರದಲ್ಲಿ ಇದನ್ನು ಉಲ್ಲೇಖಿಸಿಲ್ಲವಾದರೂ ಸ್ವತಃ ಇಂಥ ವರ್ಗಾವಣೆಯೇ ಆ ಜವಾಬ್ದಾರಿಯನ್ನು ಸೂಚಿಸುತ್ತದೆ. ಆಸ್ತಿ ಬರೆಸಿಕೊಂಡಿರುವವರು ಭರವಸೆ ನೀಡಿದಂತೆ ಆರೈಕೆ ಮಾಡದಿದ್ದರೆ ಹಿರಿಯ ನಾಗರಿಕರು ವರ್ಗಾವಣೆಯನ್ನು ರದ್ದುಗೊಳಿಸಲು ಸೆಕ್ಷನ್ 23 (1) ಅನ್ನು ಬಳಸಬಹುದು ಎಂದು ನ್ಯಾಯಪೀಠ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!