August 20, 2026
Thursday, August 20, 2026
spot_img

ಚಾಮರಾಜನಗರ ಎನ್‌ಕೌಂಟರ್‌ಗೆ ಪ್ರತೀಕಾರ : ಭೂಮಿತಾಯಿಯ ಒಡಲಿಗೆ ಬೆಂಕಿ, 10 ಎಕರೆ ಅರಣ್ಯ ನಾಶ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚಾಮರಾಜನಗರ ಜಿಲ್ಲೆಯ ಹನೂರು ವನ್ಯಜೀವಿ ವಲಯದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯ ಎನ್‌ಕೌಂಟರ್‌ಗೆ ಮೂವರು ಬಲಿಯಾಗಿದ್ದಾರೆ. ಇದರಿಂದಾಗಿ ಕಳ್ಳಬೇಟೆಗಾರರು ಆಕ್ರೋಶಕ್ಕೆ ಒಳಗಾಗಿದ್ದು, ಕಾಡಿಗೆ ಬೆಂಕಿ ಹಚ್ಚಿ ಶಿಬಿರಗಳನ್ನು ಸ್ಫೋಟಿಸಿದ್ದಾರೆ.

ಅರಣ್ಯ ಇಲಾಖೆ ಸಿಬ್ಬಂದಿಯೇ ಮೊದಲು ಬೇಟೆಗಾರರ ಮೇಲೆ ಗುಂಡು ಹಾರಿಸಿದ್ದಾರೆ ಎನ್ನುವ ಆರೋಪ ಹೊರಿಸಿದ ಕಳ್ಳಬೇಟೆಗಾರರು ಪ್ರತೀಕಾರ ತೀರಿಸಿಕೊಳ್ಳಲು ಭೂಮಿಯ ಒಡಲಿಗೇ ಕೈ ಹಾಕಿದ್ದಾರೆ. ಕಾವೇರಿ ಹಾಗೂ ಮಲೆ ಮಹದೇಶ್ವರ ವನ್ಯಜೀವಿಧಾಮಗಳಲ್ಲಿ ಅರಣ್ಯ ಸಿಬ್ಬಂದಿಯನ್ನು ಟಾರ್ಗೆಟ್ ಮಾಡುತ್ತಿರುವ ದುಷ್ಕರ್ಮಿಗಳು, ಇದೀಗ ಮಲೆ ಮಹದೇಶ್ವರ ವನ್ಯಜೀವಿಧಾಮದ ಸುಮಾರು 10 ಎಕರೆ (2.5 ಹೆಕ್ಟೇರ್) ಅರಣ್ಯ ಪ್ರದೇಶಕ್ಕೆ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾರೆ.

ಚಾಮರಾಜನಗರ ಜಿಲ್ಲೆಯ ಶಿಲುಬೆಪುರ ಅರಣ್ಯ ಪ್ರದೇಶದಲ್ಲಿ ಬೇಟೆ ತಡೆ ಶಿಬಿರವನ್ನು ಸ್ಫೋಟಿಸಿದ ಕೆಲವು ದಿನಗಳ ನಂತರ, ದುಷ್ಕರ್ಮಿಗಳು ಇದೀಗ ಕಾಡಿಗೆ ಬೆಂಕಿ ಹಚ್ಚಿದ್ದು, ಸುಮಾರು 10 ಎಕರೆ ಅರಣ್ಯ ಸಂಪೂರ್ಣವಾಗಿ ಭಸ್ಮವಾಗಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ. ಕೊಳ್ಳೇಗಾಲ ತಾಲೂಕಿನ ಶಿಲುವೆಪುರ ಅರಣ್ಯ ವ್ಯಾಪ್ತಿಗೆ ನುಗ್ಗಿರುವ ಕಿಡಿಗೇಡಿಗಳು ಕಾಡಿಗೆ ಬೆಂಕಿ ಹಚ್ಚಿದ್ದು, ಸುಮಾರು 10 ಎಕರೆಗೂ ಹೆಚ್ಚು ಅರಣ್ಯ ಸಂಪತ್ತು ಸುಟ್ಟು ಕರಕಲಾಗಿದೆ. ಕಳ್ಳಬೇಟೆಗಾರರು ಇನ್ನೂ ಹೆಚ್ಚಿನ ದಾಳಿ ಮಾಡುವ ಸಾಧ್ಯತೆ ಇದೆ!

ಕೊತ್ತನೂರು ವಲಯದಲ್ಲಿರುವ ಮಿಂಚಿನರೆಹಳ್ಳ ಅಕ್ರಮ ಬೇಟೆ ತಡೆ ಶಿಬಿರವನ್ನು ಡೈನಮೈಟ್ ಹಾಗೂ ಜಿಲೆಟಿನ್ ಕಡ್ಡಿಗಳನ್ನು ಬಳಸಿ ಸ್ಫೋಟಿಸಲಾಗಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ. ಸ್ಫೋಟದ ತೀವ್ರತೆಗೆ ಶಿಬಿರದ ಗೋಡೆಗಳು ಹಾನಿಗೊಂಡಿದ್ದು, ಒಳಗೆ ಇರಿಸಲಾಗಿದ್ದ ಹಲವು ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !