ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲಂಗಾಣದ ಖ್ಯಾತ ಜಾನಪದ ಕಲಾವಿದ ‘ಗದ್ದರ್’ (77) ಅನಾರೋಗ್ಯದಿಂದ ಇಂದು ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಗುಮ್ಮಡಿ ವಿಠ್ಠಲ ರಾವ್ ಅವರ ನಿಜವಾದ ಹೆಸರಿಗಿಂತ ಹೆಚ್ಚಾಗಿ ರಂಗನಾಮದಿಂದ ಜನಪ್ರಿಯರಾಗಿದ್ದ ಗದ್ದರ್ ಅವರು ಹೈದರಾಬಾದ್ ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
1980 ರ ದಶಕದಲ್ಲಿ ಭೂಗತರಾಗಿದ್ದ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ-ಲೆನಿನಿಸ್ಟ್) ಸದಸ್ಯರಾದ ಗದ್ದರ್, ಸಂಘಟನೆಯ ಸಾಂಸ್ಕೃತಿಕ ವಿಭಾಗವಾದ ಜನ ನಾಟ್ಯ ಮಂಡಳಿಯ ಸ್ಥಾಪಕರಾಗಿದ್ದರು.
ತೆಲಂಗಾಣ ಪ್ರತ್ಯೇಕ ರಾಜ್ಯ ಹೋರಾಟದಲ್ಲಿ ಗದ್ದರ್ ಪ್ರಮುಖ ಪಾತ್ರ ವಹಿಸಿದ್ದರು. ತಮ್ಮ ಕ್ರಾಂತಿಕಾರಿ ಸಾಹಿತ್ಯ ಮತ್ತು ಗಾಯನದ ಮೂಲಕ ‘ತೆಲಂಗಾಣ ಚಳವಳಿಗೆ’ ಹುರುಪನ್ನು ನೀಡಿದ್ದರು.
2010ರವೆರೆಗೂ ‘ನಕ್ಸಲಿಸಂ ಚಳವಳಿ’ಯಲ್ಲಿ ಗುರುತಿಸಿಕೊಂಡಿದ್ದ ಗದ್ದರ್, ತೆಲಂಗಾಣ ಪ್ರತ್ಯೇಕ ರಾಜ್ಯವಾದ ಮೂರು ವರ್ಷದ ಬಳಿಕ ಮಾವೋವಾದಿಗಳ ಸಂಪರ್ಕವನ್ನು ಸಂಪೂರ್ಣವಾಗಿ ತ್ಯಜಿಸಿದ್ದರು.
2018ರ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗದ್ದರ್ ಬೆಂಬಲಿಸಿದ್ದರು. ಭಾರತ್ ಜೋಡೊ ಯಾತ್ರೆ ಸಂದರ್ಭ ರಾಹುಲ್ ಗಾಂಧಿಯವರನ್ನೂ ಭೇಟಿ ಮಾಡಿದ್ದರು.