ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋಲ್ಕತ್ತಾದ ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಯು ಅತ್ಯಂತ ಗಂಭೀರವಾಗಿ ನಡೆಯುತ್ತಿದೆ ಎಂದು ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಮಂಗಳವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಸಿಬಿಐ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಮನೋಜ್ ಮಿಶ್ರಾ ಅವರಿರುವ ಪೀಠಕ್ಕೆ, ಪ್ರಕರಣದ ತನಿಖೆಯ ಸ್ಥಿತಿಗತಿ ಕುರಿತ ಐದನೇ ವರದಿಯನ್ನು ಸಲ್ಲಿಸಿದರು.
ತನಿಖೆಯು ಅತ್ಯಂತ ಗಂಭೀರವಾಗಿ ನಡೆಯುತ್ತಿದೆ. ಆರೋಪಿ ಸಂಜಯ್ ರಾಯ್ ವಿರುದ್ಧ ಆರೋಪ ಪಟ್ಟಿಯನ್ನು ಅಕ್ಟೋಬರ್ 7 ರಂದು ಸಲ್ಲಿಸಲಾಗಿದ್ದು, ಸೆಲ್ದಾ ನ್ಯಾಯಾಲಯವು ವಿಚಾರಣೆಗೆ ತೆಗೆದುಕೊಂಡಿದೆ ಎಂದು ಅವರು ಪೀಠಕ್ಕೆ ತಿಳಿಸಿದರು.
ಈ ಪ್ರಕರಣದಲ್ಲಿ ಇತರ ವ್ಯಕ್ತಿಗಳ ಪಾತ್ರದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಸಿಬಿಐ ತನ್ನ ವರದಿಯಲ್ಲಿ ತಿಳಿಸಿರುವುದನ್ನು ಗಮನಿಸಿದ ಪೀಠವು, ತನಿಖೆಯ ಕುರಿತ ಹೆಚ್ಚಿನ ಸ್ಥಿತಿಗತಿಯ ವರದಿಯನ್ನು ಮೂರು ವಾರಗಳಲ್ಲಿ ಸಲ್ಲಿಸುವಂತೆಯೂ ಸೂಚಿಸಿದೆ..
ವೈದ್ಯಕೀಯ ವೃತ್ತಿಪರರ ಸುರಕ್ಷತೆ ಮತ್ತು ಭದ್ರತೆಯ ಕುರಿತು ಶಿಫಾರಸುಗಳನ್ನು ಮಾಡಲು ರಚಿಸಲಾದ ರಾಷ್ಟ್ರೀಯ ಕಾರ್ಯಪಡೆ (ಎನ್‌ಟಿಎಫ್) ಸೆಪ್ಟೆಂಬರ್ ಮೊದಲ ವಾರದಿಂದ ಯಾವುದೇ ಸಭೆ ನಡೆಸಿಲ್ಲ ಎಂಬುದನ್ನೂ ಗಮನಿಸಿದ ಸುಪ್ರೀಂ ಕೋರ್ಟ್, ಕಾರ್ಯಪಡೆ ಕಾಲಮಿತಿಯಲ್ಲಿ ತನ್ನ ಕೆಲಸ ಪೂರ್ಣಗೊಳಿಸುವಂತೆ ಪೂರಕವಾದ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಕೇಂದ್ರ ಸರ್ಕಾರಕ್ಕೆ ನಿರ್ದೇಶನವನ್ನು ನೀಡಿದೆ.