ಉಡುಪಿ ಕೃಷ್ಣನ ನೈವೇದ್ಯಕ್ಕೆ ಆಸ್ಮಾ-ಅಬೂಬಕರ್ ಬೆಳೆಸಿದ ಅಕ್ಕಿ ವೈವಿಧ್ಯ: ಇಲ್ಲಿ ಬೆಳೆಯುತ್ತಿದೆ 840 ತಳಿಗಳ ಭತ್ತ!

  • ಚಿತ್ರ ವರದಿ : ಮಿಥುನ ಕೊಡೆತ್ತೂರು

ಮುಂದಿನ 2028-29ರ ಸೋದೆ ಸ್ವಾಮಿಗಳ ಪರ‍್ಯಾಯದ ಅವಧಿಯಲ್ಲಿ ದಿನಂಪ್ರತಿ ಶ್ರೀಕೃಷ್ಣನಿಗೆ ನೈವೇದ್ಯಕ್ಕಾಗಿ ದಿನಕ್ಕೊಂದು ತಳಿಯ ಅಕ್ಕಿ ನೀಡುವ ಮಹತ್ಕಾರ್ಯವನ್ನು ಕೃಷಿ ಪ್ರಯೋಗ ಪರಿವಾರ, ಉಡುಪಿ ಜಿಲ್ಲೆಯ ಭಾರತೀಯ ಕಿಸಾನ್ ಸಂಘ, ಸಾವಯವ ಕೃಷಿ ಪರಿವಾರ ಕೈಗೆತ್ತಿಕೊಂಡಿದೆ. ಇದಕ್ಕಾಗಿ ಈಗಾಗಲೇ ಕಾರ್ಕಳದ ಬಾರಾಡಿಯ ವೆಂಕಟೇಶ ಮಯ್ಯರ ಶೃಂಗ ಶ್ಯಾಮಲಾದ ಗದ್ದೆಯಲ್ಲಿ 840 ತಳಿಗಳ ಭತ್ತವನ್ನು ಬೆಳೆಯಲಾಗಿದೆ! ಈ ಅದ್ಭುತ ಸಾಧನೆಯನ್ನು ಮಾಡಿದವರು ಕಾರ್ಕಳದ ಆಸ್ಮಾ ಬಾನು ಮತ್ತು ಅಬೂಬಕರ್ ದಂಪತಿಗಳು!

ಭತ್ತದ ತಳಿಗಳ ಆಸಕ್ತಿ
ಅಬೂಬಕರ್ ಕಾರ್ಕಳದ ಹೊಟೇಲೊಂದರಲ್ಲಿ ಸುಮಾರು ಇಪ್ಪತ್ತೈದು ವರುಷಗಳಿಂದ ಮ್ಯಾನೇಜರ್ ಆಗಿರುವವರು. ಎಂಟು ವರುಷಗಳ ಹಿಂದೆ ಪೇಟೆಯಿಂದ ಕೊಂಚ ದೂರದ ಮುರತಂಗಡಿಯಲ್ಲಿ ಮನೆ ಮಾಡಿಕೊಂಡ ಅಬೂಬಕರ್ ಅವರಿಗೆ ಪರಿಚಯಸ್ಥರೊಬ್ಬರು ತಂದುಕೊಟ್ಟ ಅಕ್ಕಿ ಸ್ವಾದಿಷ್ಟವೆನಿಸಿತು. ಅದು ಖಾಲಿಯಾದಾಗ ಅಂಗಡಿಯಿಂದ ತಂದ ಅಕ್ಕಿ ಬಾಯಿಗೆ ರುಚಿ ಎನಿಸಲಿಲ್ಲ. ಮತ್ತೆ ಅದೇ ಪರಿಚಿತರಲ್ಲಿಗೆ ಹೋಗಿ ಅಕ್ಕಿ ಕೇಳಿದಾಗ ಕಾಲಿಯಾಗಿದೆ ಎಂದರು. ಹಾಗಾದರೆ ತಾನೇ ಬೆಳೆದರೆ ಹೇಗೆ ಎಂಬ ಹುಟ್ಟಿಕೊಂಡ ಕಲ್ಪನೆಯಂತೆ ಅಬೂಬಕರ್ ಮರುವರ್ಷ ಕೃಷಿಕರೊಬ್ಬರ ಹಡೀಲು ಬಿಟ್ಟ ಗದ್ದೆಯಲ್ಲಿ ಭತ್ತ ಬೆಳೆದರು.


ಮುಂದಿನ ವರ್ಷ ಮತ್ತೊಂದು ಹಡೀಲು ಗದ್ದೆಯಲ್ಲಿ ಭತ್ತದ ಬೇಸಾಯ. ದನಗಳು ಪೈರು ತಿಂದು ನಷ್ಟವಾಯಿತು. ಆದರೂ ಭತ್ತದ ಕೃಷಿಯ ಮೋಹ ಕಡಿಮೆಯಾಗಲಿಲ್ಲ. ವಿವಿಧ ತಳಿಗಳ ಭತ್ತಗಳನ್ನು ಒಟ್ಟುಗೂಡಿಸುವ ಆಸಕ್ತಿ ಬೆಳೆಯಿತು. ಆಮೇಲೆ ಕಾರ್ಕಳದ ಪೇಟೆಯ ಗದ್ದೆಯೊಂದರಲ್ಲಿ ನೂರ ಇಪ್ಪತ್ತು ತಳಿಗಳ ಭತ್ತದ ಕೊರಳನ್ನು ಬೆಳೆದು ತೆನೆಹಬ್ಬದಂದು ಸುಮಾರು 70 ತಳಿಗಳ ತೆನೆಗಳನ್ನು ಉಡುಪಿ ಕೃಷ್ಣ ಮಠಕ್ಕೆ ಸಮರ್ಪಿಸಿದರು. ಅದಮಾರು ಸ್ವಾಮಿಗಳ ಪ್ರೋತ್ಸಾಹದ ನುಡಿ ಮತ್ತಷ್ಟು ಉತ್ತೇಜನ ನೀಡಿತು. ವಿವಿಧ ದೇಶೀ ಭತ್ತದ ತಳಿಗಳ ಸಂಗ್ರಹ ಕಾರ್ಯ ಮುಂದುವರಿಯಿತು. ಸ್ಥಳೀಯ ಊರುಗಳಲ್ಲದೆ ಮಂಡ್ಯ, ಮೈಸೂರು, ಮಹಾರಾಷ್ಟ್ರ, ತಮಿಳುನಾಡು ಹೀಗೆ ಸುತ್ತಾಡಿ ಓಡಾಡಿ ಒಟ್ಟುಗೂಡಿಸಿದ ಭತ್ತದ ತಳಿಗಳ ಪಟ್ಟಿ ಬೆಳೆಯುತ್ತ ಹೋಯಿತು.

ಅದಕ್ಕಾಗಿ ಪತ್ನಿ ಅಸ್ಮಾ ಬಾನು ಪುಟ್ಟ ಮಗಳು ಮರಿಯಮ್ ಕೂಡ ಕೈ ಜೋಡಿಸಿದರಲ್ಲ, ಕಳೆದ ವರುಷ ಐನೂರು ಇದ್ದುದು ಈ ವರುಷಕ್ಕೆ 840 ತಳಿಗಳ ಬೃಹತ್ ಸಂಗ್ರಹದ ಸಾಧನೆ ಆಗಿದೆ. ಈ ಮಧ್ಯೆ ಕೃಷಿಯಲ್ಲಿ ಸಾಕಷ್ಟು ಸಾಧನೆ, ಪ್ರಯೋಗ, ಅಧ್ಯಯನ ಮಾಡಿರುವ ಮಂಗಳೂರಿನ ಶಂಕರ ಭವನ ಹೊಟೇಲು ಮಾಲಿಕ, ಉದ್ಯಮಿ, ವೆಂಕಟೇಶ ಮಯ್ಯರು ತಮ್ಮ ಗದ್ದೆಯಲ್ಲಿ ಭತ್ತದ ತಳಿಗಳನ್ನು ಬೆಳೆಸಲು ಆಹ್ವಾನವಿತ್ತು ಪ್ರೋತ್ಸಾಹಿಸಿದರು. ಅವರ ಭೂಮಿಯಲ್ಲಿ ಐವತ್ತಕ್ಕೂ ಹೆಚ್ಚು ಜಾತಿಯ ಬಾಳೆ ಗಿಡಗಳನ್ನು, ಅನೇಕ ಜಾತಿಯ ಹಲಸಿನ ಗಿಡಗಳನ್ನು ನೆಟ್ಟಿರುವ ಅಬೂಬಕರ್ ದಂಪತಿಗಳು, ಕಳೆದ ಎರಡು ವರುಷಗಳಲ್ಲಿ ನಾಗಸಂಪಿಗೆ, ಅತಿಕಾಯ ತಳಿಯ ಭತ್ತವನ್ನು ಸುಮಾರು ಮೂವತ್ತು ಕ್ವಿಂಟಾಲ್‌ನಷ್ಟು ಬೆಳೆಸಿದ್ದರು.

ಈ ಬಾರಿ ಭತ್ತದ ತಳಿಗಳನ್ನು ಬೆಳೆಯುವುದರಲ್ಲೇ ಹೆಚ್ಚು ಶ್ರಮ ಹಾಕಿದ್ದಾರೆ. ಪತ್ನಿ ಮಗಳ ಸಹಕಾರದಿಂದ 840 ಭತ್ತದ ತಳಿಗಳನ್ನು ಬೆಳೆಸಿದ್ದಾರೆ. ಕೆಲವು ತಳಿಗಳ ಒಂದೇ ಭತ್ತವನ್ನು ನಾಟಿ ಮಾಡಿ ತಳಿ ರಕ್ಷಣೆಯ ಪ್ರಯತ್ನ ನಡೆಸಿದ್ದಾರೆ. ಈ ಭತ್ತವನ್ನು ತೆಗೆದುಕೊಂಡು ಹೋಗಿ ಬೆಳೆಸುವ ರೈತರಿಗೆ ನೀಡುವ ಮೂಲಕ ತಳಿಯನ್ನು ರಕ್ಷಿಸುವ ಜೊತೆಗೆ ಭತ್ತದ ಕೃಷಿಯನ್ನೂ ಹೆಚ್ಚಿಸುವ ಪ್ರಯತ್ನ ಅಬೂಬಕರ್ ಅವರದ್ದು. ಬೇರೆ ಬೇರೆ ರುಚಿಯ, ಬೇರೆಬೇರೆ ಪರಿಮಳದ ಕಪ್ಪು, ಬಿಳಿ, ಕೆಂಪು, ನೇರಳೆ ಹೀಗೆ ನಾನಾ ಬಣ್ಣದ ಅಕ್ಕಿಯನ್ನು ಇಲ್ಲಿ ನೋಡಲು ಸಾಧ್ಯ. ತನೆಯೂ ಕಪ್ಪು, ಅಕ್ಕಿಯೂ ಕಪ್ಪು, ತಿಳಿ ಹಸಿರು, ಗಾಢ ಹಸಿರು ಹೀಗೆ ಬೇರೆ ಬೇರೆ ಬಣ್ಣದ ತೆನೆಗಳನ್ನು ಬೆಳೆಸಲಾಗಿದೆ.

ಅಬೂಬಕರ್ ಆಸಕ್ತಿ, ನಮಗೂ ಹೆಮ್ಮೆ
ಕೃಷಿಯ ಬಗ್ಗೆ ಆಸಕ್ತಿ ಇತ್ತು. ಅಬೂಬಕರ್ ಸಂಪರ್ಕ ಆದ ಬಳಿಕ ನನ್ನ ಜಮೀನಿನಲ್ಲಿ ಕೃಷಿಯ ವ್ಯಾಪ್ತಿ ಹೆಚ್ಚಿದೆ. ಅವರು ತುಂಬ ಆಸಕ್ತಿಯಿಂದ ಭತ್ತದ ಕೃಷಿಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಮಹತ್ವವಾದ ಸಾಧನೆ ಮಾಡಿದ್ದಾರೆ. ಇದರಿಂದ ನಮಗೂ ಖುಷಿ, ನಾವೂ ಹದಿನೇಳರಷ್ಟು ತಳಿಗಳ ಭತ್ತವನ್ನು ನಮ್ಮ ಗದ್ದೆಗಳಲ್ಲಿ ಬೆಳೆಸಿದ್ದೇವೆ. ಕಲಾಬಾತ್, ಕಲಾಭಾತಿ ಸೇರಿದಂತೆ, ಬರ‍್ಮಾ ಬ್ಲಾಕ್, ನಾಲ್ಕು ಕಪ್ಪು ಬಣ್ಣದ ತಳಿಗಳನ್ನು ಬೆಳೆಸಿದ್ದೇವೆ. ಸಿರಸಿಯ ಮಂಜುಗೋಣ ಸಣ್ಣಕ್ಕಿಯನ್ನೂ ಹೆಚ್ಚು ಬೆಳೆಸಿದ್ದೇವೆ. ತುಂಬ ರುಚಿಯಾದ ನಾಗಸಂಪಿಗೆ ಅಕ್ಕಿ ನಮ್ಮಲ್ಲಿ ಮಾರಾಟಕ್ಕೂ ಲಭ್ಯವಿದೆ. ಇದಕ್ಕೆಲ್ಲ ಅಬೂಬಕರ್ ದಂಪತಿಗಳ ಪ್ರೇರಣೆಯೂ ಇದೆ ಎನ್ನುತ್ತಾರೆ ವೆಂಕಟೇಶ ಮಯ್ಯರು. ಅವರು ಈಗಾಗಲೇ ವಿಯೆಟ್ನಾಂ ಮುಂತಾದೆಡೆ ಕೃಷಿ ಅಧ್ಯಯನ ಪ್ರವಾಸ ಹೋಗಿಬಂದವರು. ತನ್ನ ತೋಟದಲ್ಲಿ ಪೇರಳೆ, ಅನಾನಸು, ಮಾವು, ಹಲಸು, ಶುಂಠಿ, ಕಾಡುಹೀರೆ, ಬಾಳೆ, ಪಪ್ಪಾಯಿ, ರಂಬೂಟಾನ್ ಹೀಗೆ ನಾನಾ ಬೆಳೆಗಳನ್ನು ಬೆಳೆಸಿದ್ದಾರೆ. ಕೃಷಿ ಬಗ್ಗೆ ಸರಕಾರದಿಂದ ಪ್ರೋತ್ಸಾಹ ಇನ್ನಷ್ಟು ಅಗತ್ಯವಿದೆ. ಜನರಿಗೂ ಸಾವಯವ ಕೃಷಿಯ ಬಗ್ಗೆ ಹೆಚ್ಚು ಆಸಕ್ತಿ ಬೇಕಿದೆ ಎನ್ನುತ್ತಾರೆ ಮಯ್ಯರು.



ಭತ್ತದ ಬೆಳೆಯ ಕ್ಷೇತ್ರೋತ್ಸವ

ರಾಜ್ಯದ ತಳಿ ಸಂರಕ್ಷಣೆಯಲ್ಲಿ ಐನೂರು ರೈತರ ಜೋಡಣೆ. 28-29ರ ಸೋದೆ ಮಠದ ಪರ‍್ಯಾಯದಲ್ಲಿ ಕೃಷ್ಣನ ನೈವೇದ್ಯಕ್ಕಾಗಿ ಭತ್ತ ನೀಡುವ ಯೋಜನೆಯನ್ನು ಕೃಷಿ ಪ್ರಯೋಗ ಪರಿವಾರ, ಉಡುಪಿ ಜಿಲ್ಲೆಯ ಭಾರತೀಯ ಕಿಸಾನ್ ಸಂಘ, ಸಾವಯವ ಕೃಷಿ ಪರಿವಾರ ಅಲ್ಲದೆ ರೈತರಿಗೆ ಸಹಕಾರ ಆಗುವ ನಾನಾ ಸಂಘಟನೆಗಳೊಂದಿಗೆ ಸರಕಾರೀ ಸರಕಾರೇತರ ರೈತರ ಸಂಘಟನೆಗಳನ್ನು ಒಳಗೊಂಡು ಕೈಗೊಳ್ಳಲಾಗಿದೆ ಎನ್ನುತ್ತಾರೆ ಕೃಷಿ ಪ್ರಯೋಗ ಪರಿವಾರ ನಿರ್ದೇಶಕರಾದ ಅರುಣ್ ಕುಮಾರ್, ೨೦೨೫ರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವದ ಸಂದರ್ಭ ಕನಿಷ್ಟ 400 ತಳಿಗಳನ್ನಾದರೂ ರಕ್ಷಿಸಬೇಕೆನ್ನುವ ಯೋಚನೆ.

ರಾಜ್ಯದಲ್ಲಿ 400ರಿಂದ 500 ರೈತರನ್ನು ಜೋಡಿಸಿ ಇದನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಸುವ ಪ್ರಯತ್ನ ನಡೆದಿದೆ. ಪುರುಷೋತ್ತಮ ರಾವ್ ಕೃಷಿ ಸಂಶೋಧನಾ ಪ್ರತಿಷ್ಟಾನ, ಸಿರಸಿ ಆರ್. ಜಿ. ಭಟ್, ಬೆಳ್ತಂಗಡಿ ದೇವರಾಯರು, ಆಂಜನೇಯ ದಾವಣಗೆರೆ, ಶಂಕರ್ ಲಂಗಟಿ ಬೆಳಗಾವಿ ಹೀಗೆ ಇನ್ನೂ ಅನೇಕ ಭತ್ತದ ತಳಿ ಸಂರಕ್ಷಕರು ಇನ್ನೂರಕ್ಕಿಂತಲೂ ತಳಿಗಳನ್ನು ರಕ್ಷಿಸುತ್ತ ಬಂದಿದ್ದಾರೆ. ಇವರನ್ನೆಲ್ಲ ಸೇರಿಸಿಕೊಂಡು ಭತ್ತದ ತಳಿ ಸಂರಕ್ಷಣೆಯ ಯೋಜನೆಯ ಪ್ರಯತ್ನ ನಮ್ಮದು. ನವೆಂಬರ್ 11 ರ ಶನಿವಾರ ಮಧ್ಯಾಹ್ನ ಮೂರು ಗಂಟೆಗೆ ಕಾರ್ಕಳ ಬಾರಾಡಿಯ ಶೃಂಗ ಶ್ಯಾಮಲಾದಲ್ಲಿ ಆಸ್ಮಾ ಬಾನು, ಅಬೂಬಕರ್ ಬೆಳೆದ ಭತ್ತದ ಬೆಳೆಯ ಕ್ಷೇತ್ರೋತ್ಸವವನ್ನು ಶುದ್ಧ ನೇವೇದ್ಯ ಸಮರ್ಪಣಂ ಅಭಿಯಾನದ ಅಂಗವಾಗಿ ನಡೆಸುತ್ತಿದ್ದೇವೆ ಎಂದು ಅರುಣ್ ಕುಮಾರ್ ತಿಳಿಸಿದರು.

ಸಾವಿರ ತಳಿಗಳ ಗುರಿ
ಮುಂದಿನ ದಿನಗಳಲ್ಲಿ ಒಂದು ಸಾವಿರ ತಳಿಗಳನ್ನು ಸಂಗ್ರಹಿಸುವ ಗುರಿ ಇದೆ ಎನ್ನುತ್ತಾರೆ ಅಬೂಬಕರ್ ಅವರ ಸಾಧನೆಯಲ್ಲಿ ಸಾಥ್ ನೀಡಿರುವ ಕಾರ್ಕಳದ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಅಸ್ಮಾ ಭಾನು. ಅವರು ಪುಟ್ಟ ಮಗಳೊಂದಿಗೆ ಭತ್ತದ ತಳಿ ಸಂಗ್ರಹಕ್ಕಾಗಿ ಕರ್ನಾಟಕವಲ್ಲದೆ ಕೇರಳ ತಮಿಳುನಾಡು, ಮಹಾರಾಷ್ಟ್ರ, ಆಂಧ್ರ ಹೀಗೆ ನಾನಾ ರಾಜ್ಯಗಳನ್ನು ಸುತ್ತಿದ್ದಾರೆ. ಛತ್ತೀಸ್ ಗಡ ಸೇರಿದಂತೆ ನಾನಾ ರಾಜ್ಯಗಳ ತಳಿ ಸಂರಕ್ಷಕರನ್ನು ಕೃಷಿಕರನ್ನು ಸಂಪರ್ಕಿಸಿದ್ದಾರೆ. 840 ತಳಿಗಳನ್ನು ನೆಡುವ ಕೆಲಸದಲ್ಲಿ, ತಳಿಗಳ ಹೆಸರುಗಳ ಪಟ್ಟಿ, ಚೀಟಿ ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ. ದೇವರ ದಯೆ, ಕೃಷ್ಣನ ಅನುಗ್ರಹದಿಂದ ಇಷ್ಟು ದೊಡ್ಡ ಸಂಖ್ಯೆಯಲ್ಲಿ ತಳಿಗಳನ್ನು ಸಂಗ್ರಹಿಸಲು ಸಾಧ್ಯವಾಗಿದೆ ಎನ್ನುತ್ತಾರೆ ಆಸ್ಮಾಬಾನು. ತಳಿಗಳ ಸಂಗ್ರಹ ಕಾರ‍್ಯದಲ್ಲಿ ಅನೇಕ ಕಡೆ ನಿರಾಸೆಯೂ ಆಗಿದೆ. ಅನೇಕ ಕಡೆ ಯಶಸ್ಸೂ ಸಿಕ್ಕಿದೆ. ತಳಿ ಸಂರಕ್ಷಣೆಯ ಬಳಿಕ ಅದನ್ನು ಆಸಕ್ತರು ಬೆಳೆದು ಉಳಿಸುವುದಾದರೆ ನಮ್ಮ ಪ್ರಯತ್ನವೂ ಸಾರ್ಥಕ ಎನ್ನುತ್ತಾರೆ ಅಬೂಬಕರ್ ದಂಪತಿ. ಆರೋಗ್ಯ, ಸತ್ವ ಪೂರ್ಣ ಫಸಲಿಗಾಗಿ ಸಾವಯವ, ಸಹಜ ಕೃಷಿಯ ಬಗ್ಗೆ ಹೆಚ್ಚು ಆಸಕ್ತಿ ತೋರಿಸುತ್ತಾರೆ ಅಬೂಬಕರ್. ವೆಂಕಟೇಶ ಮಯ್ಯರ ಹಾಗೂ ಅನೇಕರ ಪ್ರೋತ್ಸಾಹವನ್ನು ಸ್ಮರಿಸುತ್ತಾರೆ ಅಬೂಬಕರ್ ದಂಪತಿಗಳು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!