ಏ.23 ರಂದು ಮೈಸೂರು-ಚಾಮರಾಜನಗರಲ್ಲಿ ಬಿಜೆಪಿ ಎಸ್ಸಿ ಮೋರ್ಚಾದಿಂದ ಬಲಗೈ ಬಲವರ್ಧನೆ ಸಮಾವೇಶ

ಹೊಸದಿಗಂತ ವರದಿ, ಮೈಸೂರು:

ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಬಿಜೆಪಿ ಎಸ್ಸಿ ಮೋರ್ಚಾದಿಂದ ಏ.೨೩ ರಂದು ಮೈಸೂರು ಹಾಗೂ ಚಾಮರಾಜನಗರದಲ್ಲಿ ಬಲಗೈ ಬಲವರ್ಧನೆಯ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಮೋರ್ಚಾದ ಮಾಜಿ ರಾಜ್ಯ ಉಪಾಧ್ಯಕ್ಷ ನಾಗರಾಜ್ ಮಲ್ಲಾಡಿ ತಿಳಿಸಿದರು.

ಶುಕ್ರವಾರ ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ ೧೦ ಗಂಟೆಗೆ ಮೈಸೂರಿನ ವಿಜಯನಗರದಲ್ಲಿರುವ ಕಲ್ಯಾಣ ಮಂಟಪದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್, ಶಾಸಕ ಟಿ.ಎಸ್.ಶ್ರೀವತ್ಸ, ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ, ಗ್ರಾಮಾಂತರ ಜಿಲ್ಲಾಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಬಳಿಕ ಮಧ್ಯಾಹ್ನ ೧ ಗಂಟೆಗೆ ಚಾಮರಾಜನಗರ ಅಂಬೇಡ್ಕರ್ ಭವನದಲ್ಲಿ ಸಮಾವೇಶ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನೇ ಬದಲಾಯಿಸಿ ಬಿಡುತ್ತಾರೆ ಎಂದು ಕಾಂಗ್ರೆಸ್‌ನವರು ಸುಳ್ಳುಗಳನ್ನು ಹೇಳುತ್ತಾ ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಸಂವಿಧಾನ ಬದಲಾಯಿಸಲು ಪ್ರಯತ್ನ ನಡೆಸಿದ್ದೇ ಕಾಂಗ್ರೆಸ್. ದಲಿತರ ಮುಗ್ದತೆಯನ್ನು ದುರುಪಯೋಗ ಮಾಡಿಕೊಂಡು, ಅಧಿಕಾರವನ್ನು ಅನುಭವಿಸಿಕೊಂಡು ಬಂದಿರುವ ಕಾಂಗ್ರೆಸ್ ಹಾಗೂ ಅದರ ನಾಯಕರ ದಲಿತರ ಮೂಗಿಗೆ ತುಪ್ಪ ಸವರಿಕೊಂಡು ಬಂದರೆ ವಿನಃ ದಲಿತರು ಸ್ವಾಭಿಮಾನದಿಂದ ಬದುಕುವಂತೆ ಮಾಡಲಿಲ್ಲ. ವೈಜ್ಞಾನಿಕ ಶಿಕ್ಷಣ, ಉದ್ಯೋಗ ಮುಂತಾದವುಗಳನ್ನು ದಲಿತರಿಗೆ ನೀಡಲಿಲ್ಲ. ಗರೀಬಿ ಹಠಾವೋ ಎಂದು ಯೋಜನೆಯನ್ನು ಜಾರಿಗೆ ತಂದು ಕಾಂಗ್ರೆಸ್ ನಾಯಕರು, ನೆಹರು ಕುಟುಂಬದ ಪರಿವಾರದವರ ಬಡತನವನ್ನೆಲ್ಲಾ ಹೋಗಲಾಡಿಸಿಕೊಂಡು, ಶ್ರೀಮಂತರಾದರೆ ವಿನಹ, ಬಡವರು, ದಲಿತರು, ಹಿಂದುಳಿದವರ ಬಡತನವನ್ನು ಹೋಗಲಾಡಿಸಲಿಲ್ಲ ಎಂದು ಕಿಡಿಕಾರಿದರು.

ಈ ದೇಶಕ್ಕೆ ಶ್ರೇಷ್ಠವಾದ ಸಂವಿಧಾನವನ್ನು ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಕಮ್ಯೂನಿಸ್ಟ್ರೊಂದಿಗೆ ಸೇರಿ ಕಾಂಗ್ರೆಸ್ ಮಾನಸಿಕವಾಗಿ ಹಿಂಸೆಯನ್ನು ನೀಡಿತ್ತು. ಚುನಾವಣೆಯಲ್ಲಿ ಅಂಬೇಡ್ಕರ್‌ರನ್ನು ಸೋಲಿಸಿ ಅಪಮಾನ ಮಾಡಿತ್ತು. ನೆಹರು, ಇಂದಿರಾಗಾoಧಿ, ಸಂಜಯ್ ಗಾಂಧಿ ಸೇರಿದಂತೆ ನೆಹರು ಕುಟುಂಬದರು ನಿಧನರಾದಾಗ ಅವರ ಅಂತ್ಯ ಸಂಸ್ಕಾರಕ್ಕೆoದು ನೂರಾರು ಎಕರೆ ಜಾಗವನ್ನು ನೀಡಿದ ಕಾಂಗ್ರೆಸ್ ಅಂಬೇಡ್ಕರ್ ಅವರ ಅಂತ್ಯಕ್ರಿಯೆಗೆ ಜಾಗವನ್ನೇ ನೀಡಲಿಲ್ಲ.ನೆಹರು ಕುಟುಂದಬವರಿಗೆಲ್ಲಾ ಭಾರತ ರತ್ನ ಪ್ರಶಸ್ತಿಯನ್ನು ನೀಡಿದ ಕಾಂಗ್ರೆಸ್ ಅಂಬೇಡ್ಕರ್ ಅವರಿಗೆ ನೀಡಲಿಲ್ಲ. ಕಾಂಗ್ರೆಸ್‌ನವರಿಗೆ ಅಂಬೇಡ್ಕರ್ ಬಗ್ಗೆ ಮಾತನಾಡುವುದಕ್ಕೆ ಯಾವುದೇ ನೈತಿಕತೆಯಿಲ್ಲ. ಅವರಿಗೆ ನಾಚಿಕೆಯಾಗಬೇಕು ಎಂದು ವಾಗ್ದಾಳಿ ನಡೆಸಿದರು.

ಸಂವಿಧಾನವನ್ನು ೮೦ ಬಾರಿ ತಿದ್ದುಪಡಿ ಮಾಡಿರುವ ಕಾಂಗ್ರೆಸ್‌ನವರಿಗೆ ಸಂವಿಧಾನದ ಬಗ್ಗೆ ಮಾತನಾಡುವುದಕ್ಕೆ ಯಾವ ನೈತಿಕತೆಯೂ ಇಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಅಂಬೇಡ್ಕರ್ ಅವರು ನೀಡಿರುವ ಸಂವಿಧಾನವನ್ನು ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ, ಬದಲಾವಣೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದರೂ, ಕಾಂಗ್ರೆಸ್ ಬಿಜೆಪಿಯವರು ಸಂವಿಧಾನ ಬದಲಾವಣೆ ಮಾಡುತ್ತಾರೆ ಎಂದು ಸುಳ್ಳುಗಳನ್ನು ಹೇಳಿ, ಅಪಪ್ರಚಾರ ಮಾಡಿ ಜನರನ್ನು ದಾರಿ ತಪ್ಪಿಸುವ ಕೆಲಸ ನಡೆಸುತ್ತಿದ್ದಾರೆ. ಹಾಗಾಗಿ ಸಮಾವೇಶಗಳನ್ನು ನಡೆಸುವ ಮೂಲಕ ಕಾಂಗ್ರೆಸ್‌ನ ಕಪಟತನದ ಬಗ್ಗೆ ಜನರಿಗೆ ತಿಳಿಸಿ, ಮನವರಿಕೆ ಮಾಡಿಕೊಡಲಾಗುವುದೆಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಎಸ್ಸಿ ಮೋರ್ಚಾದ ರಾಜ್ಯ ಪ್ರಧಾನಕಾರ್ಯದರ್ಶಿಗಳಾದ ಶೈಲೇಂದ್ರ, ಪರಮಾನಂದ, ಬಿಜೆಪಿ ಗ್ರಾಮಾಂತರ ಪ್ರಧಾನ ಕಾರ್ಯದರ್ಶಿ ಮಹೇಶ್ ಮಡವಾಡಿ, ಡಾ.ಪ್ರಫುಲ್ಲಾ ಮಲ್ಲಾಡಿ, ಕಾರ್ತಿಕ್ ಮರಿಯಪ್ಪ, ಮಾಧ್ಯಮ ಸಂಚಾಲಕ ಮಹೇಶ್ ರಾಜೇ ಅರಸ್, ವಸಂತ್ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!