ಜನಿಸಬೇಕಿರುವ ಮಗುವಿನ ಹಕ್ಕುಗಳನ್ನು ಹರಣ ಮಾಡಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
 
ಮಹಿಳೆಗೆ ಮಗು ಬೇಡವಾದಲ್ಲಿ 26 ವಾರಗಳ ಸಮಯದಲ್ಲಿ ಗರ್ಭಪಾತ ಮಾಡಿಸಿಕೊಳ್ಳಲು ಅವಕಾಶವಿದ್ದರೂ, ಹುಟ್ಟುವ ಮಗುವಿನ ಹಕ್ಕನ್ನು ನಾವು ಕಸಿದಂತಾಗುತ್ತದೆ.

ಕಾನೂನಿನ ಮೂಲಕ ನಾವು ಜನಿಸಬೇಕಿರುವ ಮಗುವಿನ ಹಕ್ಕುಗಳನ್ನು ಹರಣ ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್​ ಗುರುವಾರ ಹೇಳಿದೆ.

ಮಹಿಳೆಯೊಬ್ಬರು ತನಗೆ ಮೂರನೇ ಮಗು ಬೇಡವಾಗಿದ್ದು, 26 ವಾರಗಳ ಗರ್ಭಪಾತಕ್ಕೆ ಅನುಮತಿ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ವೇಳೆ ಕೋರ್ಟ್​ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಇಲ್ಲಿ ಮಗು ಮತ್ತು ಮಹಿಳೆಯ ಹಕ್ಕುಗಳೆರಡೂ ಅಡಗಿವೆ. ಹೀಗಾಗಿ ಸುಲಭವಾಗಿ ಆದೇಶ ನೀಡಲು ಸಾಧ್ಯವಿಲ್ಲ. ಯಾವುದೇ ಸಮಸ್ಯೆಯಿಲ್ಲದೇ ಮಗುವಿಗೆ ಜನ್ಮ ನೀಡಲು ಸಾಧ್ಯವೇ ಎಂಬುದನ್ನು ಮತ್ತೊಮ್ಮೆ ಯೋಚಿಸಿ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಅರ್ಜಿದಾರರಿಗೆ ಸಲಹೆ ನೀಡಿದೆ.

26 ವಾರಗಳ ಗರ್ಭಪಾತದ ಕುರಿತು ಬುಧವಾರ ನಡೆದ ವಿಚಾರಣೆಯಲ್ಲಿ ನ್ಯಾಯಮೂರ್ತಿಗಳಿಬ್ಬರು ಭಿನ್ನ ತೀರ್ಪು ನೀಡಿದ್ದರಿಂದ ಪ್ರಕರಣ ವಿಸ್ತೃತ ಪೀಠಕ್ಕೆ ಬಂದಿತ್ತು. ಇಂದು ನಡೆದ ವಿಚಾರಣೆಯಲ್ಲಿ ಮಹಿಳೆಯ ಜೊತೆಗೆ ಮಗುವಿನ ಹಕ್ಕೂ ಮುಖ್ಯವಾಗಿದೆ ಎಂದು ಕೋರ್ಟ್​ ಹೇಳಿತು.

ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್​ ಅವರು, “ಮಹಿಳೆಗೆ ಗರ್ಭಪಾತ ಮಾಡಿಸಿಕೊಳ್ಳಲು ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ಹಕ್ಕಿರುವ ಹಾಗೆ ಮಗವಿಗೂ ತಾನು ಜನಿಸುವ ಹಕ್ಕಿದೆ. ಹೀಗಾಗಿ ಯಾವುದೇ ಆದೇಶ ನೀಡಿದರೂ, ಹುಟ್ಟಲಿರುವ ಮಗುವಿನ ಹಕ್ಕಿನ ಮೇಲೆ ಪರಿಣಾಮ ಬೀರುತ್ತದೆ ಎಂಬ ಅಂಶವನ್ನು ನಾವು ಮರೆಯುವಂತಿಲ್ಲ. ನ್ಯಾಯಾಂಗ ಆದೇಶದ ಅಡಿಯಲ್ಲಿ ಮಗುವಿಗೆ ಹೇಗೆ ತಾನೇ ಮರಣದಂಡನೆ ವಿಧಿಸಲು ಸಾಧ್ಯ? ಎಂದು ಹೇಳಿದರು.

ಮಗು ದೈಹಿಕ ನ್ಯೂನತೆಗಳಿಂದ ಜನಿಸಿದರೆ, ಅದನ್ನು ಪಾಲಕರಾಗಲಿ ಅಥವಾ ಬೇರೆಯವರು ದತ್ತು ಕೂಡ ಪಡೆಯುವುದಿಲ್ಲ. ಅದರ ಅರಿವೂ ಕೋರ್ಟಿಗಿದೆ. ಹಾಗಂತ ಕಾನೂನಿನ ಪ್ರಕಾರ ಮಗುವನ್ನು ಕೊಲ್ಲಲು ಸಾಧ್ಯವಿಲ್ಲ. ಲೈಂಗಿಕ ದೌರ್ಜನ್ಯಕ್ಕೊಳಗಾದ ಪ್ರಕರಣದಲ್ಲಾದರೆ ಅವಕಾಶ ನೀಡಬಹುದಿತ್ತು. ಇದು ಬೇರೆಯೇ ಪ್ರಕರಣ. ಹೀಗಾಗಿ ವಿವೇಚನೆಯಿಂದ ತೀರ್ಪು ನೀಡಬೇಕಿದೆ ಎಂದರು.

ಇದೇ ಪ್ರಕರಣ ಕುರಿತು ಬುಧವಾರ ನಡೆದ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಬಿ.ವಿ.ನಾಗರತ್ನ ಅವರಿದ್ದ ಪೀಠವು ವಿವಾಹಿತ ಮಹಿಳೆಯ 26 ವಾರಗಳ ಗರ್ಭಾವಸ್ಥೆಯನ್ನು ಕೊನೆಗೊಳಿಸುವ ಬಗ್ಗೆ ಭಿನ್ನ ತೀರ್ಪು ನೀಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!