ಐಸಿಯುನಿಂದ ವಿಶೇಷ ವಾರ್ಡ್‌ಗೆ ರಿಷಬ್ ಪಂತ್ ಸ್ಥಳಾಂತರ: ಡಿಡಿಸಿಎ ನಿರ್ದೇಶಕ ಮಾಹಿತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಟೀಂ ಇಂಡಿಯಾ ಆಟಗಾರ ರಿಷಬ್ ಪಂತ್ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ.  ಸೋಂಕು ತಗುಲಬಾರದು ಎಂಬ ಉದ್ದೇಶದಿಂದ ವೈದ್ಯರು ಅವರನ್ನು ಐಸಿಯುನಿಂದ ವಿಶೇಷ ವಾರ್ಡ್‌ಗೆ ಸ್ಥಳಾಂತರಿಸಿರುವುದಾಗಿ ದೆಹಲಿ ಕ್ರಿಕೆಟ್ ಸಂಸ್ಥೆಯ ನಿರ್ದೇಶಕ ಶ್ಯಾಮ್ ಶರ್ಮಾ ಹೇಳಿದ್ದಾರೆ.

ಸದ್ಯ ರಿಷಬ್ ಪಂತ್ ಚೇತರಿಸಿಕೊಳ್ಳುತ್ತಿದ್ದು, ಭಾನುವಾರ ಸಂಜೆ ಪಂತ್ ಅವರನ್ನು ಖಾಸಗಿ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ ಎಂದು ಶರ್ಮಾ ಹೇಳಿದ್ದಾರೆ. ಪಂತ್ ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಚಿಕಿತ್ಸೆಗೆ ಸಂಪೂರ್ಣ ನೆರವು ನೀಡುವುದಾಗಿ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಕೂಡ ಘೋಷಿಸಿದ್ದಾರೆ. ಪುಷ್ಕರ್ ಸಿಂಗ್ ಧಾಮಿ ಭಾನುವಾರ ಆಸ್ಪತ್ರೆಗೆ ಪಂತ್ ಅವರನ್ನು ಭೇಟಿ ಮಾಡಿದರು. ಈ ಮಧ್ಯೆ, ಪಂತ್ ಚಿಕಿತ್ಸೆಗೆ ಸಂಬಂಧಿಸಿದಂತೆ ಬಿಸಿಸಿಐ ಕೂಡ ಪ್ರತಿಕ್ರಿಯೆ ನೀಡಿದೆ. ಪಂಥ್ ಚಿಕಿತ್ಸೆ ಸ್ವೀಕರಿಸುತ್ತಿರುವ ಆಸ್ಪತ್ರೆ ತಂಡದೊಂದಿಗೆ ಬಿಸಿಸಿಐ ಚರ್ಚಿಸಿದೆ. ಪಂತ್ ಅವರ ಹಣೆ, ಬಲ ಮೊಣಕಾಲು ಮತ್ತು ಕಾಲಿನ ಅಸ್ಥಿರಜ್ಜುಗೆ ಗಾಯಗಳಾಗಿವೆ. ಅಗತ್ಯವಿದ್ದರೆ ಈ ಗಾಯಗಳ ಚಿಕಿತ್ಸೆಗಾಗಿ ಪಂತ್ ಅವರನ್ನು ವಿದೇಶಕ್ಕೆ ಕಳುಹಿಸುವ ಬಗ್ಗೆ ಬಿಸಿಸಿಐ ನಿರ್ಧಾರ ತೆಗೆದುಕೊಳ್ಳುತ್ತದೆ. ಇನ್ನೊಂದೆಡೆ ಪಂತ್ ಭೇಟಿಗೆ ವಿಐಪಿಗಳು ಬರುತ್ತಿದ್ದಾರೆ. ವಿಶ್ರಾಂತಿ ಪಡೆಯಲು ಕೂಡ ಸಮಯವಿಲ್ಲ ಎನ್ನುತ್ತಾರೆ ಪಂತ್ ಕುಟುಂಬಸ್ಥರು.

ಶಾಸಕರು, ಸಚಿವರು, ಕ್ರೀಡಾಪಟುಗಳು, ಅಧಿಕಾರಿಗಳು, ನಟರು ಸತತವಾಗಿ ಬರುತ್ತಿದ್ದು, ವಿಶ್ರಾಂತಿಯಿಂದ ವಂಚಿತರಾಗಿದ್ದಾರೆ ಎಂದು ಪಂತ್ ಕುಟುಂಬಸ್ಥರು ತಿಳಿಸಿದ್ದಾರೆ. ಭೇಟಿ ವೇಳೆಯನ್ನು ಲೆಕ್ಕಿಸದೆ ಪಂತ್ ಭೇಟಿಗೆ ಬರುತ್ತಿದ್ದಾರೆ ಎಂಬ ಆರೋಪವೂ ಇದೆ. ಪಂತ್ ಶೀಘ್ರ ಗುಣಮುಖರಾಗಬೇಕಾದರೆ ವಿಶ್ರಾಂತಿ ಪಡೆಯುವುದು ಅತೀ ಅಗತ್ಯ ಎಂದು ವೈದ್ಯರು ತಿಳಿಸಿದ್ದಾರೆ. ಸಂದರ್ಶಕರೊಂದಿಗೆ ಮಾತನಾಡುವುದರಿಂದ ಅವರು ಹೆಚ್ಚಿನ ಶಕ್ತಿಯನ್ನು ಕಳೆದುಕೊಳ್ಳುವುದರ ಜೊತೆಗೆ ಒತ್ತಡಕ್ಕೆ ಒಳಗಾಗುತ್ತಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!