ಹೊಸ ದಿಗಂತ ವರದಿ, ಶ್ರೀರಂಗಪಟ್ಟಣ :
ಜಿಲ್ಲೆಯ ಜೀವನಾಡಿ ತಾಲ್ಲೂಕಿನ ಕೆ.ಆರ್.ಎಸ್ ಕನ್ನಂಬಾಡಿ ಅಣೆಕಟ್ಟೆಯು ಭರ್ತಿಯಾಗಿರುವ ಕಾರಣ ಜಲಾಶಯದಿಂದ 52,000 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದ್ದು, ತಗ್ಗು ಪ್ರದೇಶದ ಕೆಲ ಪ್ರದೇಶಗಳು ಭಾಗಶಹ ಮುಳುಗಡೆಯಾಗಿವೆ.
ತಾಲ್ಲೂಕಿನ ರಂಗನತಿಟ್ಟು ಪಕ್ಷಿಧಾಮ, ಪಶ್ಚಿಮವಾಹಿನಿ, ಸ್ನಾನಘಟ್ಟ್ಟ, ಶ್ರೀಸಾಯಿ ಮಂದಿರ, ವೆಲ್ಲೆಸ್ಲಿ ಸೇತುವೆ ಸೇರಿದಂತೆ ಕಾವೇರಿ ನದಿ ತೀರದ ತಗ್ಗು ಪ್ರದೇಶಗಳು ಭಾಗಶಹ ಮುಳುಗಡೆಗೊಂಡಿವೆ. ಕೆಲವೆಡೆ ಜಮೀನುಗಳಿಗೆ ನೀರು ನುಗ್ಗಿದ್ದು, ಭತ್ತದ ನಾಟಿಗೆ ಸಿದ್ದತೆ ಮಾಡಿಕೊಂಡಿದ್ದ ರೈತರಿಗೆ ಸಂಕಷ್ಟ ತಂದೊಡ್ಡಿದೆ.
ಪ್ರಸ್ತುತ ಅಣೆಕಟ್ಟೆಗೆ 60,016 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಅಣೆಕಟ್ಟೆಯಲ್ಲಿ 123.20 ಅಡಿ (ಗರಿಷ್ಠ 124.80) ಸಂಗ್ರಹವಾಗಿದೆ. ಅಣೆಕಟ್ಟೆಯ ಸುರಕ್ಷತೆ ದೃಷ್ಟಿಯಿಂದ 52,020 ಕ್ಯೂಸೆಕ್ ನೀರನ್ನು ಕಾವೇರಿ ನದಿ ಮೂಲಕ ಹರಿದು ಬಿಡಲಾಗುತ್ತಿದೆ.
ಮುಂಗೃತಾ ಕ್ರಮವಾಗಿ ಸಾರ್ವಜನಿಕರು ಕಾವೇರಿ ನದಿಗಿಳಿಯದಂತೆ ಎಚ್ಚರಿಕೆ ವಹಿಸಿ, ಜಿಲ್ಲಾ ಹಾಗೂ ತಾಲೂಕು ಆಡಳಿತದ ವತಿಯಿಂದ ನದಿ ತೀರ ಪ್ರದೇಶಗಳಲ್ಲಿ ಪ್ರವೇಶ ನಿರ್ಬಂಧಿಸಿ ಪೊಲೀಸ್ ಬ್ಯಾರಿಗೇಟ್ ಸೇರಿದಂತೆ ತಾತ್ಕಾಲಿಕ ತಡೆಗೋಡೆ ನಿರ್ಮಿಸಲಾಗಿದೆ.
ದೋಣಿ ವಿಹಾರ ಸ್ಥಗಿತ : ಕಾವೇರಿ ಜಲಾಶಯದಿಂದ ಕಾವೇರಿ ನದಿ ಮೂಲಕ 50 ಸಾವಿರ ಕ್ಯೂಸೆಕ್‌ಕ್ಕೂ ಅಧಿಕ ನೀರು ಹೊರ ಬಿಡುತ್ತಿರುವ ಹಿನ್ನಲೆಯಲ್ಲಿ ಮುಂಜಾಗೃತ ಕ್ರಮವಾಗಿ ರಂಗನತಿಟ್ಟು ಪಕ್ಷಿಧಾಮದಲ್ಲಿ ಬೋಟಿಂಗ್ ನಿಷೇಧಿಸಲಾಗಿದೆ. ಪ್ರವಾಸಿಗರ ಪ್ರವೇಶಕ್ಕೂ ಸಹ ನಿರ್ಬಂಧ ಹೇರಲಾಗಿದೆ.