July 27, 2026
Monday, July 27, 2026
spot_img

ಆಹಾರ ಉತ್ಸವದಲ್ಲಿ ಹರಿದ ರಕ್ತದ ಹೊಳೆ: ಸಿಯಾಟಲ್ ಸೆಂಟರ್ ಫೈರಿಂಗ್ ವಿಡಿಯೋ ವೈರಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದ ವಾಷಿಂಗ್ಟನ್ ರಾಜ್ಯದ ಸಿಯಾಟಲ್ ಸೆಂಟರ್‌ನಲ್ಲಿ ಆಯೋಜಿಸಲಾಗಿದ್ದ ‘ಬೈಟ್ ಆಫ್ ಸಿಯಾಟಲ್’ ವಾರ್ಷಿಕ ಆಹಾರ ಉತ್ಸವದಲ್ಲಿ ಭೀಕರ ಗುಂಡಿನ ದಾಳಿ ಸಂಭವಿಸಿದೆ. ನೆರೆದಿದ್ದ ಜನಸ್ತೋಮದ ಮೇಲೆ ನಡೆದ ಈ ಅನಿರೀಕ್ಷಿತ ದಾಳಿಯಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಹಾರ್ಬರ್‌ವ್ಯೂ ವೈದ್ಯಕೀಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರತ್ಯಕ್ಷದರ್ಶಿಗಳ ಆತಂಕ ಹಾಗೂ ತನಿಖೆ

ಸಂಜೆ ಸುಮಾರು 6 ಗಂಟೆಯ ವೇಳೆಗೆ ಏಕಾಏಕಿ 7 ರಿಂದ 8 ಬಾರಿ ಗುಂಡಿನ ಶಬ್ದ ಕೇಳಿಬಂತು. ಇದರಿಂದ ಗಾಬರಿಗೊಂಡ ಸಾರ್ವಜನಿಕರು ಪ್ರಾಣಭಯದಿಂದ ದಿಕ್ಕಾಪಾಲಾಗಿ ಓಡಿದರು. ಬೃಹತ್ ಸಂಖ್ಯೆಯಲ್ಲಿ ಜನರು ಆಹಾರ ಸವಿಯಲು ನೆರೆದಿದ್ದ ಸಂದರ್ಭದಲ್ಲೇ ಈ ದೋಖಾಕಾರಿ ಘಟನೆ ನಡೆದಿದ್ದು, ಸ್ಥಳೀಯವಾಗಿ ಭೀತಿಯ ವಾತಾವರಣ ಸೃಷ್ಟಿಯಾಗಿದೆ. ಪ್ರಸ್ತುತ ಘಟನಾ ಸ್ಥಳವನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಶೂಟರ್‌ಗಳ ಪತ್ತೆಗೆ ಬಲೆ ಬೀಸಿದ್ದಾರೆ.

1982 ರಿಂದ ನಡೆಯುತ್ತಿರುವ ಐತಿಹಾಸಿಕ ಉತ್ಸವ

1982 ರಿಂದ ನಿರಂತರವಾಗಿ ನಡೆಯುತ್ತಿರುವ ಈ ಪ್ರಸಿದ್ಧ ಮೂರು ದಿನಗಳ ಉತ್ಸವಕ್ಕೆ ಸುಮಾರು 3.5 ಲಕ್ಷಕ್ಕೂ ಹೆಚ್ಚು ಜನರು ಆಗಮಿಸುವ ನಿರೀಕ್ಷೆಯಿತ್ತು. ಆದರೆ, ಹಬ್ಬದ ವಾತಾವರಣದಲ್ಲಿದ್ದ ಈ ಸಂಭ್ರಮವು ಕ್ಷಣಾರ್ಧದಲ್ಲಿ ರಕ್ತಸಿಕ್ತ ದುರಂತವಾಗಿ ಮಾರ್ಪಟ್ಟಿದೆ. ಘಟನೆಯ ಆತಂಕಕಾರಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !