ಬರಡಾದ ನದಿಗಳಿಗೆ ಪುನರ್ಜನ್ಮ ನೀಡಲು ತಿರುವನಂತಪುರದಿಂದ ಕಾಸರಗೋಡಿಗೆ ಸಾಗಿಬರಲಿದೆ ನದಿ ಯಾತ್ರೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬತ್ತಿ ಬರಡಾಗುತ್ತಾ ಅಪಾಯದಂಚಿನಲ್ಲಿರುವ ಜಲಮೂಲಗಳಿಗೆ ಪುನರ್ಜನ್ಮ ನೀಡುವ ನಿಟ್ಟಿನಲ್ಲಿ ಕೇರಳದ ನ್ಯಾಶನಲ್ ಎನ್‌ಜಿಓ ಕಾನ್‌ಫೆಡರೇಶನ್ ಹೊಸ ಯೋಜನೆ ರೂಪಿಸಿದ್ದು, ಇದರ ಅಂಗವಾಗಿ ತಿರುವನಂತಪುರದ ನಯ್ಯಾರಿನಿಂದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತನಕ ನದಿ ಯಾತ್ರೆ ನಡೆಸಲು ಸಿದ್ಧತೆ ನಡೆಸಿದೆ.

ಕಾನ್‌ಫೆಡರೇಶನ್ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಕೆ.ಎನ್. ಆನಂದ ಕುಮಾರ್ ಸಾರಥ್ಯದಲ್ಲಿ ಸಾಗಲಿರುವ ಈ ಯಾತ್ರೆಯಲ್ಲಿ ವಿವಿಧ ಸಮಾಜಮುಖಿ ಸ್ವಯಂಸೇವಾ ಸಂಘಟನೆಗಳ ಮೂರು ಸಾವಿರಕ್ಕೂ ಅಧಿಕ ಕಾರ್ಯಕರ್ತರು ಹೆಜ್ಜೆಹಾಕಲಿದ್ದಾರೆ. ಮೂಲಗಳ ಮಾಹಿತಿ ಪ್ರಕಾರ ಮೇ ತಿಂಗಳ ಮೊದಲ ವಾರದಲ್ಲಿ ಈ ಯಾತ್ರೆಗೆ ಚಾಲನೆ ಸಿಗಲಿದೆ. ಇದಕ್ಕಾಗಿ ಅಟ್ಟಂಗಾಲ್‌ನ ಮಾಮಂ ಹೊಳೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಜಲಸಂರಕ್ಷಣೆ ಬಗ್ಗೆ ನಾಗರಿಕರಲ್ಲಿ ಜಾಗೃತಿ ಮೂಡಿಸುವುದು ಈ ಯಾತ್ರೆಯ ಉದ್ದೇಶವಾಗಿದ್ದು, ಯಾತ್ರೆಯುದ್ದಕ್ಕೂ ಹೊಳೆಗಳಿಗೆ ಮರುಜೀವ ತುಂಬುವ ವಿಧಾನಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗುತ್ತದೆ. ಜೊತೆಗೆ ವಿವಿಧ ಸ್ಪರ್ಧೆಗಳು, ಬೀದಿ ನಾಟಕ, ಓಟ್ಟಂ ತುಳ್ಳಲ್ ಇತ್ಯಾದಿಗಳ ಆಕರ್ಷಣೆಯೂ ಇರಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!